ಸ್ವಲ್ಪ ಸರಿದು ನಿಂತುಕೋ…

ಒಬ್ಬ ರಾಜ ಇದ್ದ. ಮಹಾ ಪರಾಕ್ರಮಿ. ಅನೇಕ ದೇಶಗಳನ್ನು ಗೆದ್ದ. ಅನೇಕ ರಾಜರನ್ನು ತನ್ನ ಅಡಿಯ ಆಳುಗಳನ್ನಾಗಿ ಮಾಡಿಕೊಂಡ. ಸುತ್ತ ಮುತ್ತಲಿನ ಜನ ಇವನ ಪ್ರತಿಯೊಂದು ಕೆಲಸಕ್ಕೂ ವಾಹ್ ವಾಹ್ ಎನ್ನತೊಡಗಿದರು. ಸಹಜವಾಗಿಯೇ ಇದ್ದ ಪರಾಕ್ರಮದ ಪಕ್ಕದಲ್ಲಿ ಅಹಂಕಾರಕ್ಕೂ ಮನೆ ದೊರಕಿತು.

ಒಮ್ಮೆ ರಾಜ ಒಂದು ಸಮುದ್ರದ ದಡದ ಮೇಲೆ ಓಡಾಡುತ್ತಿದ್ದ. ನಡೆದು ಕೊಂಡು ಹೋಗುತ್ತಲೇ ಇದ್ದಾಗ ಮನಸ್ಸು ಪರಾಕ್ರಮ, ತನ್ನ ಯುದ್ಧಕೌಶಲ, ತಾನು ಗೆದ್ದ ಬಗೆ, ಸೆಟೆದು ನಿಂತ ಹಟಮಾರಿ ರಾಜರನ್ನು ಬಗ್ಗಿಸಿದ ತನ್ನ ಜಾಣ್ಮೆ ಇವುಗಳನ್ನೇ ಮೆಲುಕು ಹಾಕುತ್ತಾ ಇತ್ತು. ಕೈ ಬೆರಳುಗಳು ತನಗೆ ಅರಿವಿಲ್ಲದಲೇ ಮೀಸೆಯ ಮೇಲೆ ಓಡಾಡುತ್ತಾ ಇದ್ದವು. ಆದರೆ ಒಂದು ಹಂತದಲ್ಲಿ ಕಾಲು ಅಪ್ರಯತ್ನವಾಗಿ ನಿಂತುಹೋದವು!

ಯಾಕೆ?

ದಾರಿಯಲ್ಲೊಬ್ಬ ಗಡ್ಡಧಾರಿ ವೃದ್ಧ ಚಿಕ್ಕದೊಂದು ವಸ್ತ್ರವನ್ನು ತನ್ನ ಸೊಂಟಕ್ಕೆ ಸುತ್ತಿಕೊಂಡು ಇವನ “ದಾರಿಗೆ ಅಡ್ಡ” ಮಲಗಿಬಿಟ್ಟಿದ್ದ. “ಅರೆ, ನನ್ನ ದಾರಿಗೆ ಅಡ್ಡ ಬಂದನಲ್ಲ” ಅಂತ ಒಂದರೆಕ್ಷಣ ಇವನಿಗೆ ಕೋಪ ಬಂದು ಹುಬ್ಬುಗಳು ಮೇಲೇರಿದವು. ಆದರೆ ಅಷ್ಟೇ ವೇಗವಾಗಿ ಕೆಳಗೂ ಇಳಿದವು.

ಯಾಕೆ?

ಆ ವೃದ್ಧನ ಮುಖದಲ್ಲಿದ್ದ ನಿಶ್ಚಿಂತ ಸಂತಸದ ರೇಖೆಗಳನ್ನು ನೋಡಿ ರಾಜನಿಗೆ… ಅಲ್ಲ ಅಲ್ಲ… ಮಹಾರಾಜನಿಗೆ…. ಅಲ್ಲಲ್ಲ… ಜಗದೇಕವೀರನಿಗೆ ಆಶ್ಚರ್ಯವಾಯಿತು. ಇದೇನು? ಜಗತ್ತನ್ನೇ ಜಯಿಸಿದ ರಾಜ ಬಂದರೂ ಭಯಪಡುತ್ತಿಲ್ಲ! ಅಂತ.  ವೃದ್ಧನ ಈ ಧೈರ್ಯಕ್ಕೇನೇ ಚಕ್ರವರ್ತಿ ಆಶ್ಚರ್ಯ ಪಟ್ಟಿದ್ದು. ಈ ಆಶ್ಚರ್ಯವು ಕೋಪವನ್ನು ಶಮನ ಮಾಡಿತು, ಕೋಪವು ಕುತೂಹಲಕ್ಕೆ ಪರಿವರ್ತನೆ ಆಯಿತು. ಹಾಗಾಗಿ ಹುಬ್ಬುಗಳು ಕೆಳಗೆ ಇಳಿದವು.  ಭಯ ಉಂಟು ಮಾಡುವ ಧೀರನೇ ಬಂದರೂ ಭಯದಿಂದ ಎದ್ದು ನಿಂತು ಗೌರವ ಸಲ್ಲಿಸದೆ ಈ ಮರಳಿನ ಮೇಲೆ ಹೊರಳಾಡುತ್ತಾ ಇದ್ದಾನಲ್ಲ ಈ ಮುದುಕ ಅಂತ ಇವನಿಗೆ ಪರಮಾಶ್ಚರ್ಯವಾಯಿತು.

ಸರಿ, ಮಾತಿಗೆ ಆರಂಭವಾಯಿತು.

ನಾನಾರು ಗೊತ್ತೇನು?

ಇಲ್ಲ. ನನಗೆ ಗೊತ್ತಿಲ್ಲ. ನನಗೆ ಗೊತ್ತಾಗಿ ಏನಾಗಬೇಕಾಗಿಯೂ ಇಲ್ಲ.

ನಾನು ಈ ಜಗತ್ತನ್ನೇ ಜಯಿಸಿದ ಶೂರ. ಎಲ್ಲರೂ ನಾನೆಂದರೆ ಅಂಜುತ್ತಾರೆ ಗೊತ್ತೇನು?

ಹೌದಾ? ಇರಬಹುದೇನೋ ನೀನು ಜಗತ್ತನ್ನು ಜಯಿಸಿದವ. ಆದರೆ ಈಗ ಅದರಿಂದ ನನಗೇನು ಆಗಬೇಕು?

ಏನಾಗಬೇಕು? ಇದೆಂಥ ಮಾತು? ನಾನ್ಯಾರು ಅಂತ ತಿಳಿಯದೆ ಏನೇನೋ ಮಾತು ಆಡುತ್ತಿದ್ದೀಯಲ್ಲ!

ನಿನ್ನನ್ನು ತಿಳಿದುಕೊಂಡರೆ ನನಗೇನು ಲಾಭ?

ಅರೆ, ನಾನು ಸಾರ್ವಭೌಮ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ ಗೊತ್ತೇ?

ಓಹೋ ಹಾಗೇನು? ಏನು ಬೇಕಾದರೂ ಮಾಡಲು ನೀನು ಶಕ್ತನೋ?

ಹೌದು.

ಹಟಮಾರಿ ವೃದ್ಧ ಮಲಗಿಕೊಂಡೇ ಹೇಳಿದ.  ಹೌದಾ, ಹಾಗಿದ್ದರೆ, ಎಲ್ಲಿ? ಸಧ್ಯಕ್ಕೆ ಸ್ವಲ್ಪ ನೀನು ನಿಂತ ಜಾಗದಿಂದ ಸರಿದು ನಿಂತುಕೋ ನೋಡೋಣ! ನಿನಗೆ ಸಾಧ್ಯವಾಗುತ್ತೇನೋ ನೋಡುತ್ತೇನೆ. ಎಳೆಯ ಸೂರ್ಯನ ಬಿಸಿಲು ಬೀಳುತ್ತಿದೆ. ಅದರ ಆನಂದವನ್ನು ನಾನು ಅನುಭವಿಸುತ್ತಾ ಇದ್ದೀನಿ. ಈಗ ನೀನು ಅದಕ್ಕೆ ಅಡ್ಡ ನಿಂತಿದ್ದೀಯ. ನೀನು  ಪಕ್ಕಕ್ಕೆ ಸರಿದರೆ ನನ್ನ ಆನಂದ ನನಗೆ ಮತ್ತೆ ದೊರಕುವುದು.

ಮಹಾಪರಾಕ್ರಮಿ ರಾಜನಿಗೆ ಕ್ಷಣಮಾತ್ರದಲ್ಲಿ ತನ್ನ ತಪ್ಪಿನ ಅರಿವಾಯಿತು. ಬೇರೆಯವರ ಆನಂದದ ಮೊಳಕೆಯನ್ನು ತನ್ನ ದರ್ಪದಿಂದ ಹೊಸಕಿ ಹಾಕಿದ ಕ್ರೌರ್ಯದ ಕೃತ್ಯಗಳು ನೆನಪಾದವು. ಪಶ್ಚಾತ್ತಾಪ ಪಟ್ಟ. ಈ ವೃದ್ಧನು ತನ್ನ ಶೌರ್ಯವನ್ನು ಕ್ಷಣಮಾತ್ರದಲ್ಲಿ ತಿರಸ್ಕರಿಸಿದ ಬಗೆಯೂ ಸಹ ತನ್ನ ತೋಳ್ಬಲವನ್ನು ಮೀರಿ ನಿಂತ ಸಂತಸವು ಜಗತ್ತಿನಲ್ಲಿ ಇದೆ ಎನ್ನುವ ವಾಸ್ತವವನ್ನು ತೋರಿಸಿಕೊಟ್ಟಿತು. ಮಾತ್ರವಲ್ಲ ಆ ಸಂತಸವು ತ್ಯಾಗದಿಂದಲೇ ಹೊರತು ದರ್ಪ, ಶಕ್ತಿ ಹಾಗು ಅಧಿಕಾರದ ಬಲದಿಂದ ಅಲ್ಲ ಎನ್ನುವ ಸತ್ಯದ ದರ್ಶನವನ್ನೇ ಆ ವೃದ್ಧನ ವರ್ತನೆ ಮಾಡಿಸಿತು. ಮೌನವಾಗಿ ವೃದ್ಧನ ಕಾಲಿಗೆರಗಿದ.  ಸಾತ್ವಿಕವಾದ ಆನಂದದ ಬೀಜ ಅವನಲ್ಲಿ ಮೊಳಕೆಯೊಡೆಯಿತು.

***

ಒಂದಿಷ್ಟು ಎಕ್ಸ್ಟ್ರಾ ಮಾಹಿತಿ

  • ಜಗತ್ತನ್ನೇ ಜಯಿಸಿದೆನೆಂಬ ಹಮ್ಮು ಇದ್ದವನು ಮತ್ತಾರೂ ಅಲ್ಲ. ಅಲೆಕ್ಜಾಂಡರ್!  ಆ ವೃದ್ಧನು ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿಯಾದ ಡಯೊಜೆನಿಸ್!!.  ಇವರಿಬ್ಬರ ಮಧ್ಯ ನಡೆದ ಈ ಸಂಭಾಷಣೆ ಜಗತ್ರ್ಪಸಿದ್ಧ. ಇದನ್ನೇ ನಾನು ಕನ್ನಡದ ಧ್ವನಿಗೆ ಹೊಂದಿಸಿದ್ದೇನೆ ಅಷ್ಟೆ.
  • ತ್ಯಾಗದಿಂದ ದೊರೆಯುವ ಸಂತೋಷವೇ ಅಮರ ಎನ್ನುವುದನ್ನು ಮಹಾನಾರಾಯಣೋಪನಿಷತ್ತು “ತ್ಯಾಗೇನೈಕೆ ಅಮೃತತ್ತ್ವಮಾನಶುಃ” ಎಂದು ವರ್ಣಿಸುತ್ತದೆ. ಯತಿಗಳ ದರ್ಶನ ಮಾಡಿದಾಗ ಈ ಮಂತ್ರವನ್ನು ಪಠಿಸುವುದು ಸಂಪ್ರದಾಯ.
  • ಈ ಅಲೆಕ್ಸಾಂಡರನನ್ನು ಪ್ರಸಿದ್ಧ ವಿದ್ವಾಂಸರಾದ ಡಾ. ಶಂಕರ ಮೊಕಾಶಿ ಪುಣೇಕರರು ಅಲಕಸುಂದನೆಂದು ಕರೆದಿದ್ದಾರೆ. (ಅವಧೇಶ್ವರಿ)

ಒಂದಿಷ್ಟು ತಲೆಹರಟೆ

ರಾಯಚೂರಿಗೂ ಬಂದಿದ್ದಾನೆ ಈ ಅಲೆಕ್ಸಾಂಡರ್. ಹೆಸರು ಸಹ ಸ್ವಲ್ಪ ಬದಲಾಗಿದೆ. ಇಲ್ಲಿದೆ ನೋಡಿ.

Photo0352

 

ಕೊನೆಯದಾಗಿ…..

ಈ ಕಥೆಗೆ ಆರಿಸಿಕೊಂಡ ಸಮುದ್ರ ತೀರದ ಚಿತ್ರ  ಕಥೆಗೆ ಹೊಂದಿಕೆಯಾಗುವುದೋ ಇಲ್ಲವೋ ಗೊತ್ತಿಲ್ಲ. ಆನಂದವನ್ನು ಕೊಟ್ಟಿದೆ ಆದ ಕಾರಣ ಬಳಸಿದ್ದೇನೆ. ಮೂಲ ಇಲ್ಲಿದೆ

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

  1. naveen
    September 25, 2014
    Reply

    Nice..)…

Leave a Reply

This site uses Akismet to reduce spam. Learn how your comment data is processed.