ಜಗತ್ತಿನ ಮೊತ್ತ ಮೊದಲ ಯಶಸ್ವೀ ಪ್ರೇಮಪತ್ರ

ಮದುವೆಗಳನ್ನು ಸ್ಥೂಲವಾಗಿ ಪ್ರೇಮವಿವಾಹ ಮತ್ತು ಹಿರಿಯರು ನಿರ್ಧರಿಸಿದ ವಿವಾಹ ಎಂದು ವಿಭಾಗಿಸೋಣ. ಇವುಗಳಲ್ಲಿ ಎರಡನೆಯದ್ದೇ ಹೆಚ್ಚು ಪ್ರಚಲಿತ. ಮೊದಲನೆಯದ್ದಕ್ಕೆ ಅಡಚಣೆಗಳೇ ಹೆಚ್ಚು. ಇದಕ್ಕೆ ಕಾರಣ ಮತ್ತು ಉದಾಹರಣೆಗಳನ್ನು ಇಲ್ಲಿ ಹೆಚ್ಚು ಚರ್ಚಿಸುವುದು ಬೇಡ. ಅದಕ್ಕಿಂತಲೂ ಬಹಳ ಮುಖ್ಯವಾದ ವಿಚಾರವನ್ನು ಇಲ್ಲಿ ಹೇಳಲಿಕ್ಕೆ ಇದೆ.

ಕೆನ್ನೆಗೆ ಎರಡು ಬಿಗಿದೋ, ಕೂಡಿಟ್ಟೋ, ಊರು ಬಿಡಿಸಿಯೋ, ಮೇಲಿಂದ ಮೇಲೆ ಅತ್ತೂ ಕರೆದು ಮಾಡಿಯೋ ಪ್ರೇಮಕ್ಕೆ ಒಂದು ಗತಿ ಕಾಣಿಸಿರುವ ಉದಾಹರಣೆಗಳು ಹೇರಳ. ಹುಡುಗ ಮತ್ತು ಹುಡುಗಿ ಎರಡೂ ಕಡೆಗಳಿಂದಲೂ ಪ್ರೇಮಕ್ಕೆ ವಿರೋಧ ಬರುವ ಸಂದರ್ಭಗಳಿದ್ದರೂ ಸಹ ಹುಡುಗಿಯ ಮೇಲೆ ಒತ್ತಡ ಸಹಜವಾಗಿಯೇ ಹೆಚ್ಚಾಗಿರುವುದು ಸಮಾಜದ ಒಂದು ವೈಪರೀತ್ಯ.

ಕಾರ್ಯ ಮತ್ತು ಕಾರಣ ಏನೇ ಇರಲಿ ಅಂತೂ ಪ್ರೇಮವಿವಾಹವನ್ನು ಹಿರಿಯರು ಅಷ್ಟು ಸುಲಭವಾಗಿ ಒಪ್ಪಲಾರರು ಅನ್ನುವುದು ವಾಸ್ತವ. ಹಿರಿಯರ ಮಾತನ್ನು ಮೀರಿ ಮದುವೆಯಾಗುವುದಕ್ಕೆ ಅನೇಕ ಕಿರಿಯರಲ್ಲಿ ಧೈರ್ಯವಿರುವುದೂ ಇಲ್ಲ ಅನ್ನುವುದು ಒಂದು ತಮಾಶೆಯೂ ಹೌದು.

ಆದರೆ ಹುಡುಗ ಶಾಸ್ತ್ರವೇತ್ತ, ಧೈರ್ಯಶಾಲಿ ಹಾಗು ಪ್ರಾಮಾಣಿಕನಾಗಿದ್ದರೆ ಮನೆಯವರ ವಿರೋಧವನ್ನೂ ಮೀರಿ ಅವನನ್ನು ಪ್ರೀತಿಸಿ, ಅವನ ಹಿಂದೆ ಹೋಗಿ (ಅವನಿಂದ ಎಳೆಸಿಕೊಂಡು ಹೋಗಿ ಎನ್ನುವುದು ಸರಿ ಎನಿಸುತ್ತದೆ) ಮದುವೆಯಾದರೂ ತಪ್ಪಿಲ್ಲ ಎಂದು ಇಡೀ ಜಗತ್ತಿನ ತಾಯಿಯಾದ ರುಗ್ಮಿಣಿಯು ಹೇಳುತ್ತಾಳೆ.

ಬರೀ ಹೇಳುವುದೇನು? ತಾನೇ ಮಾಡಿ ತೋರಿಸಿದ್ದಾಳೆ ನೋಡಿ.

ದ್ವಾಪರದಲ್ಲಿ ಭೀಷ್ಮಕ ಎನ್ನುವ ರಾಜನ ಮಗಳಾಗಿ ಲಕ್ಷ್ಮಿ ದೇವಿ ಅವತರಿಸಿದಳು. ಅದ್ಭುತವಾದ ಸುಂದರಿಯಾದ ಆಕೆಯ ಹೆಸರು ರುಗ್ಮಿಣೀ. ಆಕೆಯ ಅಣ್ಣನಾಗಿ ಹುಟ್ಟಿದವನು ರುಗ್ಮಿ. ಈ ರುಗ್ಮಿಗೆ ಅಹಂಕಾರ, ಅವಿವೇಕ ಮತ್ತು ದುಷ್ಟತನಗಳು ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿದ್ದವು. ಅವನ ತರಹದವರೇ ನಾಲ್ಕಾರು ರಕ್ಕಸರು ಅವನ ಸ್ನೇಹಿತರು. ಶಿಶುಪಾಲನೆಂಬ ತಲೆಹರಟೆಯು ಅವರಲ್ಲಿ ಒಬ್ಬ. ರುಗ್ಮಿಯು ತನ್ನ ತಂಗಿಯನ್ನು ಈ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡುತ್ತೇನೆಂದು ಮಾತುಕೊಟ್ಟಿದ್ದ. ತಂಗಿಗೆ ಇದು ಸ್ವಲ್ಪವೂ ಇಷ್ಟವಿಲ್ಲ. ಆಕೆಯು ಅಮಿತವಿಕ್ರಮನೆಂದು ಖ್ಯಾತನಾದ ಸಿರಿಕೃಷ್ಣನಿಗೆ ಮನಸೋತಿದ್ದಳು. ಅಣ್ಣನಿಗೆ ಇದು ಸರಿಕಾಣದೆ ಆಕೆಯನ್ನು ಎಲ್ಲೂ ಹೋಗದಂತೆ ನಿರ್ಬಂಧಿಸಿ ಇಟ್ಟ.

ಮನೆಗೆ ಬೀಗ ಹಾಕಬಹುದು, ಆದರೆ ಮನಸ್ಸಿಗೆ ಹಾಕಲಾದೀತೇ? ರುಗ್ಮಿಣಿಯು ಸದಾಕಾಲ ಮುಕುಂದನ ಧ್ಯಾನದಲ್ಲಿಯೇ ಮಗ್ನಳಾಗಿದ್ದಳು.

ರುಗ್ಮಿಯು ಶಿಶುಪಾಲನಿಗೇ ತನ್ನ ತಂಗಿಯನ್ನು ಕೊಡುವುದಾಗಿ ಮಾತು ಕೊಟ್ಟಿದ್ದರೂ ನೆಪ ಮಾತ್ರಕ್ಕೆ ಸ್ವಯಂವರವನ್ನು ಏರ್ಪಡಿಸಿದ. ಅದರಲ್ಲಿ ಹೇಗಿದ್ದರೂ ಶಿಶುಪಾಲನೇ ಗೆಲ್ಲುವುದು ಎನ್ನುವ ಕುತಂತ್ರವಿತ್ತು.  ರುಗ್ಮಿಣಿಗೆ ಇದು ತಿಳಿಯಿತು, ಆಕೆ ತಡ ಮಾಡದೆ ತನ್ನೆಲ್ಲ ಪ್ರೇಮವನ್ನೂ ತುಂಬಿಸಿ ಪತ್ರವೊಂದನ್ನು ಬರೆದ ಬ್ರಾಹ್ಮಣನೋರ್ವನ ಮೂಲಕ ಅದನ್ನು ಕೃಷ್ಣನಿಗೆ ತಲುಸಿದಳು. ಮೇಲ್ನೋಟಕ್ಕೆ ತುಂಬಾ ಸರಳವಾದ ಆದರೆ ಪಾರಮಾರ್ಥಿಕವಾದ, ಹರಿ ಸರ್ವೋತ್ತಮತ್ವವನ್ನೇ ಸಾರುವ ಪತ್ರವಿದು.

ಭಕ್ತಿಗೆ ವಶನಾಗುವ ಘನಶ್ಯಾಮನು ಈ ಪತ್ರವನ್ನು ಓದಿ ಓಡಿ ಬಂದ, ಶಿಶುಪಾಲಾದಿಗಳನ್ನು ಸದೆಬಡಿದು ರುಗ್ಮಿಣಿಯನ್ನು ಕರೆದೊಯ್ದ! ಎಲ್ಲ ನೀಚರಿಂದಲೂ ತನ್ನ ಇನಿಯಳನ್ನು ದೂರಮಾಡಿ, ದ್ವಾರಕೆಗೆ ಕರೆದೊಯ್ದು ಮದುವೆಯಾದ.

ಇದು ರುಗ್ಮಿಣಿಯ ಕಲ್ಯಾಣದ ಸಂಕ್ಷಿಪ್ತ ಕಥೆ.

ಹುಡುಗಿಯರೇ, ನೀವೇನಾದರೂ ಪ್ರೇಮದಲ್ಲಿ ಬಿದ್ದಿರುವಿರೇನು? ಮನೆಯಲ್ಲಿ ಒಪ್ಪಿಗೆ ಸಿಗದೆ ಒದ್ದಾಡುತ್ತಿದ್ದೀರೇನು? ಮನಸ್ಸು  ಕಳವಳಗೊಂಡಿದೆಯೇ? ಹಾಗಿದ್ದರೆ ರುಗ್ಮಿಣಿಯು ಮಾಡಿದ ಈ ಕೃಷ್ಣ ಸ್ತುತಿಯನ್ನು ವಿಶ್ವಾಸಪೂರ್ವಕ ಭಕ್ತಿಯಿಂದ, ಶುದ್ಧ ಮನದಿಂದ ಓದಿರಿ. ಅರ್ಥೈಸಿಕೊಳ್ಳಿರಿ. ನಿಮ್ಮ ಇಚ್ಛೆಯು ಖಂಡಿತವಾಗಿಯೂ ಕೈಗೂಡುವುದು.

ಯಾರನ್ನೂ ಪ್ರೇಮಿಸಿಲ್ಲ ಆದರೆ ಒಳ್ಳೆಯ ಸಾತ್ವಿಕನಾದ ಗಂಡ ಬೇಕು ಎನ್ನುವವರೂ ಮತ್ತು ಮದುವೆ ಅನೇಕ ಕಾರಣಗಳಿಂದ ತಡವಾಗುತ್ತಿದೆ ಎನ್ನುವವರೂ ಈ ಸ್ತುತಿಯನ್ನು ಪಠಿಸಿ ಫಲವನ್ನು ಪಡೆಯಬಹುದು.

ಅನುಷ್ಠಾನಕ್ಕೆ ಮೊದಲು…

೧. ನಿಮ್ಮ ಆಯ್ಕೆಯನ್ನು ಧರ್ಮವು ಅಂಗೀಕರಿಸುವುದೋ ಇಲ್ಲವೋ ಎನ್ನುವುದನ್ನು ಮೊದಲು ತಿಳಿದುಕೊಳ್ಳಿರಿ. ಸಾಮಾನ್ಯ ಧರ್ಮಕ್ಕೂ ವಿರುದ್ಧವಾದ ಪ್ರೇಮ ನಿಮ್ಮದಾಗಿದ್ದಲ್ಲಿ ಅತ್ಯಂತ ಶ್ರೇಷ್ಠಮಟ್ಟದ ಜ್ಞಾನಪೂರ್ವಕ ಭಕ್ತಿಯೊಂದೇ ನಿಮ್ಮ ಪ್ರೇಮಕ್ಕೆ ಜೀವನದ ಕೊನೆಯವರೆಗೂ ಯಶಸ್ಸನ್ನು ಕೊಡಬಲ್ಲದು. ಆ ಮಟ್ಟದ ಭಕ್ತಿ ನಮ್ಮಲ್ಲಿ ಇಲ್ಲದಿದ್ದಾಗ ಪ್ರಾಮಾಣಿಕವಾಗಿಯೇ ವಸ್ತುಸ್ಥಿತಿಯನ್ನು ಅರುಹಿ ಅದನ್ನು ಮುಂದುವರೆಸದಿರುವುದು ಇಬ್ಬರಿಗೂ ಕ್ಷೇಮ. ಪಾಪಪ್ರಜ್ಞೆಯು  ಸಹ ಕಾಡುವುದಿಲ್ಲ.

೨. ನಿಮ್ಮ ಆಯ್ಕೆಯು ಎಲ್ಲ ರೀತಿಯಿಂದ ಸರಿಯಾಗಿದೆ ಎನ್ನುವುದನ್ನು ನಿಮ್ಮ ಅಂತಃಸಾಕ್ಷಿಯು ಒಪ್ಪುವುದೋ ಇಲ್ಲವೋ ದೃಢಮಾಡಿಕೊಳ್ಳಿರಿ. ಯಾಕೆಂದರೆ ಬಹುತೇಕ ಪ್ರಕರಣಗಳಲ್ಲಿ ವ್ಯಾಮೋಹವನ್ನೇ (infatuation) ಪ್ರೇಮವೆಂದು ತಪ್ಪಾಗಿ ಭಾವಿಸುವ ಸಂಭವನೀಯತೆ ಇದೆ. ಇದು ಅಪಾಯಕಾರಿ.

ಪ್ರೇಮಪತ್ರವನ್ನು ಬರೆಯುವ ಮನಸ್ಸಿದ್ದಲ್ಲಿ…

೧. ರುಗ್ಮಿಣಿಯು ತನ್ನ ಪತ್ರದಲ್ಲಿ ಕೃಷ್ಣನಿಗೆ “ನನ್ನನ್ನು ಎಳೆದುಕೊಂಡು ಹೋಗಿಬಿಡು” ಎಂದು ಬರೆದಂತೆ ನೀವೂ ಪತ್ರ ಬರೆಯಿರಿ. ತಪ್ಪೇನೂ ಇಲ್ಲ. ಆದರೆ ಸಾತ್ವಿಕತೆ, ಪ್ರಾಮಾಣಿಕತೆ, ಧೈರ್ಯ, ಗಾಂಭೀರ್ಯ, ತನ್ನ ಆಶ್ರಯಕ್ಕೆ ಬಂದವರಿಗೆ ಪ್ರಶಾಂತತೆಯನ್ನು ಕೊಡುವ ಸಾಮರ್ಥ್ಯ, ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇದೆ ಹುಡುಗನಲ್ಲಿ ಎನ್ನುವುದನ್ನು ಸ್ಥಿರಪಡಿಸಿಕೊಳ್ಳಿರಿ.

೨. “ಕೃಷ್ಣಾ! ಬಂದು ಇವರನ್ನೆಲ್ಲ ಗೆದ್ದು ನನ್ನನ್ನು ಮದುವೆ ಆಗು” ಎಂದು ರುಗ್ಮಿಣಿಯು ಹೇಳಿರುವುದರಲ್ಲಿ ಅರ್ಥವಿದೆ. ಲಕ್ಷ್ಮಿಯು ಇದ್ದಲ್ಲಿ ದುರುಳರು ಆಕೆಯನ್ನು ಅಪಹರಿಸಲು ಬರುವುದು ಸಹಜ. ಅಂಥವರ ಸಹವಾಸ ನನಗೆ ಬೇಡ, ಅವರನ್ನು ಸೋಲಿಸು ನೀನು ಎಂದಿರುವಳು. ಗಮನಿಸಿ. ನನ್ನ ಅಂತಃಪುರದಲ್ಲಿ ಇರುವವರನ್ನು ಕೊಲ್ಲದೆ ನನ್ನನ್ನು ಮದುವೆಯಾಗು ಎಂದು ಕೂಡ ಆಕೆ ಹೇಳುತ್ತಾಳೆ. ತನ್ನ ಆಪ್ತರಿಗೆ ಹಾನಿ ಆಗಬಾರದು ಎಂದು ಆಕೆಯ ಕೋರಿಕೆ. ಆಕೆಯ ಆಪ್ತರು ಎಂದರೆ ಸಾತ್ವಿಕರು ಎಂದು ಅರ್ಥ. ಲೋಭ, ಮೋಹವುಳ್ಳವರು, ಕೇವಲ ಧನ ಮಾತ್ರ ಬೇಕು ಜ್ಞಾನ ಬೇಡ ಎನ್ನುವವರು, ಶ್ರೀಹರಿಯ ಸಾರ್ವಭೌಮತ್ವವನ್ನು ಒಪ್ಪದವರು ರುಗ್ಮಿಣಿಯ ಆಪ್ತರಾಗಲು ಸಾಧ್ಯವಿಲ್ಲ. ಶಿಶುಪಾಲ, ಜರಾಸಂಧ ಮೊದಲಾದವರಿಗೆ ರುಗ್ಮಿಣಿಯ ಸೌಂದರ್ಯ ಮತ್ತು ಅವಳ ಹಿಂದೆ ಬರಬಹುದಾದ ಸಂಪತ್ತು ಬೇಕೆ ವಿನಃ ಜ್ಞಾನ ಮತ್ತು ಭಕ್ತಿಯು ಬೇಡ. ಶ್ರೀಕೃಷ್ಣನನ್ನಂತೂ ಅವರು ಸದಾ ದ್ವೇಷಿಸುವವರು. ಹಾಗಾಗಿ ಇವರನ್ನು ಸೋಲಿಸು, ಆದರೆ ನನ್ನ ಅಂತರಂಗದ ಜನರು ನಿನ್ನ ಭಕ್ತರು. ಅವರನ್ನು ಸಲಹು ಎಂದು ಭೈಷ್ಮಿಯ ಪ್ರಾರ್ಥನೆಯಿದೆ. ಈ ಮರ್ಮವನ್ನು ನೀವು ಮೊದಲು ತಿಳಿದು ನಂತರ ಪತ್ರವನ್ನು ಬರೆಯಿರಿ.

೩. ನಿಮ್ಮ ಪ್ರೇಮಕ್ಕೆ ಪರವಾನಗಿ ಕೊಡಲಿಲ್ಲ ಎಂದ ಮಾತ್ರಕ್ಕೆ “ಇವರನ್ನೆಲ್ಲ ಒದ್ದಾದರೂ ನನ್ನನ್ನು ಕರೆದುಕೊಂಡು ಹೋಗು” ಎನ್ನುವುದು ಪ್ರಮಾದಕ್ಕೆ ದಾರಿ ಮಾಡೀತು.  ಒಪ್ಪಿಗೆ ಯಾಕೆ ಸಿಗುತ್ತಿಲ್ಲ ಎನ್ನುವುದನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಿರಿ. ಆ ನಿರಾಕರಣೆಯು ಕಾರಣರಹಿತವಾದುದು ಎನ್ನಿಸಿದಲ್ಲಿ ಹಿರಿಯರಿಗೆ ಮೊದಲು ನಿಮ್ಮ ಪ್ರೇಮದಲ್ಲಿ ಕಲಹವಿಲ್ಲ, ನಿಮ್ಮ ಪ್ರಿಯಕರ ಸಾತ್ವಿಕನು ಎಂಬ ವಿಷಯವನ್ನು ಮನವರಿಕೆ ಮಾಡಿಕೊಡಿ.

ರುಗ್ಮಿಣಿಯು ಕೃಷ್ಣನಿಗೆ “ನಿನ್ನ ಚತುರಂಗ ಬಲವನ್ನು ತಂದು ಇವರನ್ನು ಸೋಲಿಸು” ಎಂದು ಹೇಳುತ್ತಾಳೆ. ವಾಸ್ತವದಲ್ಲಿ ಕೃಷ್ಣನಿಗೆ ಚತುರಂಗದ ಅಗತ್ಯವೇ ಇಲ್ಲ. ಒಬ್ಬನೇ ಬಂದು ಎಲ್ಲರನ್ನೂ ಸೋಲಿಸಿ ರುಗ್ಮಿಣಿಯನ್ನು ಕರೆದೊಯ್ಯಬಲ್ಲ. ಆದರೆ ರುಗ್ಮಿಣಿಯ ಪತ್ರವು ವಾಸ್ತವದಲ್ಲಿ ನಮಗೆ ಪ್ರೇಮಸಿದ್ಧಿಯ ರಹಸ್ಯವನ್ನು ತಿಳಿಸುತ್ತಿದೆಯೇ ಹೊರತು ಅವಳ ಅಸಹಾಯಕತೆಯನ್ನು ಪ್ರದರ್ಶಿಸುತ್ತಿಲ್ಲ.

ನೀವು ನಿಮ್ಮ ಪ್ರಿಯಕರನಿಗೆ ಬರೆವ ಪತ್ರದಲ್ಲಿ “ಮನೆಯವರನ್ನು ಗೆದ್ದು ನನ್ನನ್ನು ಕರೆದೊಯ್ಯಿ ಎಂದು ಹೇಳಬೇಕಿರುವುದು “ನಿನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ನಮ್ಮ ಅಣ್ಣನಿಗೆ ಒದ್ದಾದರೂ ನನ್ನನ್ನು ಕರೆದುಕೊಂಡು ಹೋಗು” ಎಂಬ ಅರ್ಥದಲ್ಲಿ ಅಲ್ಲ. ’ಮನೆಯವರ ಮನಸ್ಸನ್ನು ಗೆದ್ದು’ ಎಂಬ ಅರ್ಥದಲ್ಲಿ. ನಮಗೆ ಅನ್ವಯಿಸುವ ಆ ಚತುರಂಗ ಬಲವೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎನ್ನುವ ನಾಲ್ಕು ಬಲಗಳು. ಧರ್ಮ = ಸರಿಯಾದ ಜೀವನ ಕ್ರಮ, ಅರ್ಥ = ಸಂಪತ್ತು, ಕಾಮ = ಹೆಂಡತಿಯೊಂದಿಗೆ ಸಾಮರಸ್ಯದ ಬಾಳ್ವೆ, ಮೋಕ್ಷ = ಸಾತ್ವಿಕ ಸಾಧನೆಯ ಬಲ ಎನ್ನುವ ಆ ಚತುರಂಗವನ್ನು  ತಂದು ಮನೆಯವರಿಗೆ ಸಮಾಧಾನವಾಗುವ ರೀತಿಯಲ್ಲಿ ಅವರ ಹೃದಯವನ್ನು ಗೆದ್ದು ನನ್ನನ್ನು ವರಿಸು ಎಂಬ ಅರ್ಥದಲ್ಲಿ ಪತ್ರ ಬರೆಯಿರಿ.

ಇದು ಈ ಪತ್ರರೂಪ ಸ್ತೋತ್ರವು ನಮಗೆ ಕೊಡುವ ಸಂದೇಶದ ಸಂಕ್ಷಿಪ್ತ (ಅತಿ ಸಂಕ್ಷಿಪ್ತ ) ವಿವರಣೆ. ಹೆಚ್ಚಿನ ವಿಶ್ಲೇಷಣೆಯನ್ನು ಇಲ್ಲಿ ಮಾಡಿಲ್ಲ. ಸಾತ್ವಿಕ ಪ್ರೇಮಕ್ಕೆ ಜಯವಾಗಲಿ ಅನ್ನುವದಷ್ಟೇ ನನ್ನ ಉದ್ದೇಶ.

ಅನುಷ್ಠಾನದ ಕ್ರಮ

ಭಾಗವತ ಮಹಾಪುರಾಣದ ೧೦ನೆಯ ಸ್ಕಂದದಲ್ಲಿ ಬರುವ ಶ್ರೀಕೃಷ್ಣಸ್ತುತಿ ಇದು.  ಅತ್ಯಂತ ಫಲಪ್ರದವಾದುದು.

೧. ಪಾರಾಯಣದ ಉದ್ದೇಶವು ಪ್ರಿಯಕರನೊಂದಿಗೆ ವಿವಾಹಪ್ರಾಪ್ತಿ ಆದ ಕಾರಣ ಮನೆಯಲ್ಲಿ ಹಿರಿಯರ ಅಪ್ಪಣೆಯನ್ನು ಪಡೆದುಕೊಳ್ಳಿರಿ.

೨. ಶುದ್ಧ ಮನಸ್ಸು ಹಾಗು ದೇಹದಿಂದ ದೇವರ ಮುಂದೆ ಕುಳಿತು ಆಚಮನ, ಪ್ರಾಣಾಯಾಮ ಮತ್ತು ಸಂಕಲ್ಪವನ್ನು ಮಾಡಿ.  ಕೈಲಾದಷ್ಟು ಬಾರಿ ಈ ಸ್ತೋತ್ರವನ್ನು ಪಠಿಸಿ. ಒಂದು ಬಾರಿ ಓದಲು ಬರಿ ೩ ನಿಮಿಷಗಳು ಸಾಕು. ಅರ್ಧಗಂಟೆಗೆ ೧೦ ಬಾರಿ ಆಗುವುದು. ಕನಿಷ್ಠ ೪೮ ದಿನವಾದರೂ ಪಠಿಸಿರಿ.

೩.ಅನುಕೂಲವಾದಲ್ಲಿ ಶ್ರೀಕೃಷ್ಣರುಗ್ಮಿಣಿಯರಿಗೆ ಸಕ್ಕರೆಯನ್ನೋ ಹಾಲನ್ನೋ ನಿವೇದಿಸಿ. ನಂತರ ಮಂಗಳಾರತಿಯನ್ನುಮಾಡಿರಿ.

೪. ನಿಮ್ಮ ಇಷ್ಟ ಸಿದ್ಧಿಯಾದ ನಂತರ ಉದ್ಯಾಪನೆಯನ್ನು ಮಾಡಬಹುದು.

  • ರುಗ್ಮಿಣೀ ಸಂದೇಶವನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿರಿ

ಋಗ್ಮಿಣೀ ಸಂದೇಶ 111

ಚಿತ್ರ ಕೃಪೆ:

www.puthuthinnai.com

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.