ಮುಗ್ಧತೆ ಮತ್ತು ದಡ್ಡತನ ಹಾಗು ಮೋಸ

ಹೂವಯ್ಯ ವಿದ್ಯಾವಂತ. ಸ್ನೇಹಜೀವಿ ಮತ್ತು ಭಾವಜಗತ್ತಿನ ವಿಹಾರಿ. ಆತನನ್ನು ತನ್ನ ಯಜಮಾನನ ಸ್ಥಾನದಲ್ಲಿ ನಿಲ್ಲಿಸಿಕೊಂಡಿರುವ ಸೀತೆ ಮುಗ್ಧೆ. ಭಾವುಕಳಾಗಿದ್ದರೂ ತನ್ನ ಭಾವನೆಗಳನ್ನು ಹೂವಯ್ಯನಂತೆ ರಸಮಯವಾಗಿ ವ್ಯಕ್ತಪಡಿಸಲು ಆಕೆಗೆ ಆಗದು.  ಇಂತಿಪ್ಪ ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ ಆದರೆ ದುರ್ದೈವದಿಂದ ಸೀತೆಯ ವಿವಾಹವು ಬೇರೆಯವರೊಂದಿಗೆ ನಿಶ್ಚಯವಾಗಿ ಅದು ಒಂದು ದುರ್ಘಟನೆಯೇ ಆಗಿ ಹೋಗುತ್ತದೆ. ಇದರೊಂದಿಗೆ  ಹೂವಯ್ಯನ ಜೀವನದಲ್ಲಿ ಆತ ನಿರೀಕ್ಷಿಸದೇ ಇರುವ ಕೆಲವು ಘಟನೆಗಳು ನಡೆದು ಮೊದಲೇ ಭಾವುಕನಾದ ಆತ ಅಂತರ್ಮುಖಿಯಾಗಿ ಹೋಗುತ್ತಾನೆ. ಆತ ಬೇರೆಯವರನ್ನು ಮದುವೆಯಾಗದೇ ಹಾಗೆಯೇ ಉಳಿಯುತ್ತಾನೆ.

ಮತ್ತೋರ್ವ ಮುಗ್ಧೆ ಹೂವಯ್ಯನ ತಾಯಿ ನಾಗಮ್ಮನವರು. ಇವರು ಭಾರತದ ಲಕ್ಷಾವಧಿ ಸರಳ ಸ್ತ್ರೀಯರಲ್ಲಿ ಒಬ್ಬರು. ನಿಬಿಡವಾದ ಅರಣ್ಯದ ಮಧ್ಯವೇ ಇರುವ ಅಪರೂಪದ ಮನೆಗಳೊಂದರಲ್ಲಿ ಜನಿಸಿ, ಬೆಳೆದು, ಮದುವೆಯಾಗಿ ಅಲ್ಲಿಯೇ ತಮ್ಮ ಬಾಳಿನ ಕೊನೆಯನ್ನೂ ಕಾಣುತ್ತಾರೆ. ಮಗ ಮದುವೆಯಾಗದೆ ಉಳಿದಿರುವುದು ಸಹಜವಾಗಿಯೇ ಅವರಿಗೆ ದುಃಖದ ಸಂಗತಿಯಾಗಿತ್ತು. “ಮದುವೆಯಾಗು ಮದುವೆಯಾಗು” ಎಂದು ಮೇಲಿಂದ ಮೇಲೆ ಹೇಳುತ್ತಲೇ ಇದ್ದರು. ಆತ ಅದನ್ನು ಮುಂದೂಡುತ್ತಲೇ ಇದ್ದ. ಆದರೂ ಮಗ ಮದುವೆಯಾದಾನು ಎನ್ನುವ ಹಂಬಲದಿಂದ ತಾಯಿ ಏನು ಹೇಳುತ್ತಿದಳು ಎನ್ನುವುದನ್ನು ನೋಡಿ.

“ನಾಗಮ್ಮನವರಿಗೆ ಪ್ರಪಂಚದ ಕಲ್ಯಾಣವೆಲ್ಲ ತಮ್ಮ ಮಗನ ಮದುವೆಯ ಮೇಲೆ ನಿಂತಹಾಗಿತ್ತು. ಎಲ್ಲಿ ಯಾರಿಗೆ ಏನು ಅನಾಹುತವಾದುದನ್ನು ಕೇಳಿದರೂ ಸರಿ “ಪ್ರಾಯಕ್ಕೆ  ಬಂದವರು ಮದುವೆ ಆಗದಿದ್ದರೆ ಮತ್ತೇನಾಗ್ತದೆ?” ಎನ್ನುತ್ತಿದ್ದರು. ಒಮ್ಮೆ ಹೂವಯ್ಯ ಜಾರಿ ಬಿದ್ದು ಪೆಟ್ಟಾದಾಗಲೂ ’ಮದುವೆ ಮಾಡಿಕೊಂಡಿದ್ರೆ ಹೀಂಗೆಲ್ಲಾ ಅಗ್ತಿತ್ತೇನು?” ಎಂದರಂತೆ. ಇನ್ನೊಮ್ಮೆ  ’ನಂದಿ’ ಎತ್ತು ಅಗಳಿಗೆ ಬಿದ್ದು ಕಾಲು ಮುರಿದುಕೊಂಡಾಗ “ನೀನು  ಲಗ್ನಾಗಿದ್ದರೆ ಹೀಂಗೆಲ್ಲಾ ಆಗ್ಬೇಕಿತ್ತೇನೋ” ಈಗಲಾದ್ರೂ ಮಾಡಿಕೊಂಡ್ರೆ ಪಾಪ, ಆ ಗೋವಿನ ಕಾಲಾದ್ರೂ ಸರಿಯಾಗ್ತದೆ” ಎಂದು ಬುದ್ಧಿ ಹೇಳಿದರಂತೆ. ಮಳೆಯಾಗದಿದ್ದರೆ, ಮಳೆ ಹೆಚ್ಚಾಗಿ ಬಂದು ಗದ್ದೆಯ ಅಂಚು ಕೋಡಿಬಿದ್ದರೆ, ಅಡಕೆಯ ತೋಟಕ್ಕೆ ಕೊಳೆ ರೋಗ ಬಂದರೆ, ರಾತ್ರಿ ಗೂಬೆ ಕೂಗಿದರೆ, ನಾಯಿ ವಿಕಟವಾಗಿ ಬಳ್ಳಿಕ್ಕಿದರೆ, ಸಂತೆಯಲ್ಲಿ ಪದಾರ್ಥಗಳಿಗೆ ಬೆಲೆ ಹೆಚ್ಚಿದರೆ – ಎಲ್ಲಕ್ಕೂ ಹೂವಯ್ಯ ಮದುವೆಯಾಗದಿರುವುದೇ ಮುಖ್ಯ ಕಾರಣವೆಂದು ಹೇಳುತ್ತಿದ್ದರು. ಅವರಿಗೆ ಇನ್ನು ಎರಡು ಮೂರು ವರ್ಷಗಳಲ್ಲಿ ಯುರೋಪು ಖಂಡದಲ್ಲಿ ಘೋರಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿದ್ದಿದ್ದರೆ, ಅದಕ್ಕೂ ತನ್ನ ಮಗ ಮದುವೆಯಾಗದಿರುವುದನ್ನೇ ಏಕಮಾತ್ರ ಕಾರಣವನ್ನಾಗಿ ಒಡ್ದುತ್ತಿದ್ದರೆಂದು ತೋರುತ್ತದೆ!

Vidyamanyaru
ಶ್ರೀ ವಿದ್ಯಾಮಾನ್ಯತೀರ್ಥರು

ಈ ಮೇಲೆ ಹೇಳಿದ್ದೆಲ್ಲ ನಾನು ಮೇಲಿಂದ ಮೇಲೆ ಓದಿರುವ/ಓದುವ ಅವರ ಕಾನೂರು ಹೆಗ್ಗಡಿತಿ ಕಾದಂಬರಿಯ ಸಾರ. ಕನ್ನಡ ಮಾತ್ರವಲ್ಲ ಸಹೃದಯರಾದ ಎಲ್ಲರೂ ಮೆಚ್ಚುವ ಸಾಹಿತಿ ಕುವೆಂಪು ಅವರ ಕೃತಿ. ಕುವೆಂಪು ಬಹಳ ರಸವತ್ತಾಗಿ ಬರೆಯುತ್ತಾರೆ. ತುಂಬುತೂಕದ ಮಾತುಗಳು ಅವರವು. ಗಾಂಭೀರ್ಯಕ್ಕೆ ಎಲ್ಲಿಯೂ ಅಪಚಾರವಾಗದಂತೆ ಬರೆಯುವ ಅವರ ಹಾಸ್ಯ ನನಗೆ ಬಲು ಇಷ್ಟ. ವಿಷಯವೊಂದರ ಗಾಂಭೀರ್ಯತೆಯನ್ನು ಈ ರೀತಿಯಾಗಿ ಪರಿಶುದ್ಧವಾದ ಹಾಸ್ಯದ ಮಿಶ್ರಣದೊಂದಿಗೆ ವಿವರಿಸುವುದು ಕುವೆಂಪು ಅವರಂತಹ ರಸಾಭಿಜ್ಞರಿಗೆ ಮಾತ್ರ ಸಾಧ್ಯ.  ತಾಯಿಯ ಅಂತರಂಗವೇನೋ ಹೀಗೆ ಇದ್ದರೂ ವಿಧಿಯ ಸಂಚು ಬೇರೆಯೇ ಇತ್ತು. ಮುಂದೆ ಹೂವಯ್ಯ ಮತ್ತು ಸೀತೆಗೆ ಮದುವೆಯೇ ಆಗದೆ ಅವರಿಬ್ಬರೂ ಪರಿಶುದ್ಧವಾದ ಅವಿವಾಹಿತ ಜೀವನವನ್ನು ನಡೆಸುವ ಒಂದು ಹಂತಕ್ಕೆ ಬರುತ್ತಾರೆ. ಅದೇ ಅವಸ್ಥೆಯಲ್ಲಿಯೇ ಕಾದಂಬರಿಯೂ ಮುಕ್ತಾಯವಾಗುತ್ತದೆ.

ಇದೆಲ್ಲ ಸರಿ. ನಾನಿಲ್ಲಿ ಕುವೆಂಪು ಅವರ ಕುರಿತಾಗಲಿ, ಕಾದಂಬರಿಯ ಬಗ್ಗೆಯಾಗಿ ಅಥವಾ ಅದರ ಪಾತ್ರಗಳ ಬಗ್ಗೆಯಾಗಲಿ ವಿಮರ್ಶೆ ಮಾಡಹೊರಟಿಲ್ಲ. ನಾನು ಹೇಳಬೇಕಾಗಿರುವ ವಿಷಯವೇ ಬೇರೆ. ಅದೂ ಲೌಕಿಕ ಜಗತ್ತಿಗೆ ಸಂಬಂಧಿಸಿಲ್ಲ. ಪಾರಮಾರ್ಥಿಕ ಪ್ರಪಂಚಕ್ಕೆ ಸಂಬಂಧಿಸಿದೆ. ಪ್ರಪಂಚ ಯುದ್ಧದ ಬಗ್ಗೆ ಬಂದಂತಹ ಮಾತು ಹಾಗು ಕಾದಂಬರಿಯಲ್ಲಿ ಬಂದಂತಹುದೇ ಒಂದು ಒಂದು ಸಂದರ್ಭ ನನ್ನ ತಲೆಯಲ್ಲಿ ಅದನ್ನು ಓದುವಾಗಲೆಲ್ಲ ಬರುತ್ತದೆ.

ಗೊಂದಲ ಪಡಬೇಡಿ, ಇದನ್ನು ಓದಿ.

ಈ ಶತಮಾನವು ಇಬ್ಬರು ಅತ್ಯಂತ ಮುಗ್ಧರಾದ ಸಂತರನ್ನು ಕಂಡಿದೆ. ಮೊದಲನೆಯವರು ಉಡುಪಿಯ ಶ್ರೀವಿದ್ಯಾಮಾನ್ಯತೀರ್ಥರು ಎರಡನೆಯವರು ಮಂತ್ರಾಲಯದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು. ಮಂತ್ರಾಲಯದ ಗುರುಗಳ ಸಮೀಪದ ಒಡನಾಟ ನನಗೆ ನನ್ನ ಹಿರಿಯರ ಸುಕೃತದಿಂದ ದೊರಕಿತ್ತು. ಅವರ ಬಗ್ಗೆಯೇ ಸಾಕಷ್ಟು ಬರೆಯಲಿಕ್ಕೆ ಇದೆ. ಬರೆಯುವ ಬುದ್ಧಿ ಬರಬೇಕು. ಶ್ರೀವಿದ್ಯಾಮಾನ್ಯರ ಸಮೀಪದ ಒಡನಾಟ ನನಗೆ ದೊರಕಿರಲಿಲ್ಲ. ಆದರೆ ಅವರ ಮುಗ್ದತೆಯ ಬಗ್ಗೆ ಇನ್ನಿತರ ಹಿರಿಯರಿಂದ ಕೇಳಿ ಬಲ್ಲೆ. ಆ ರೀತಿಯಾಗಿ ಕೇಳಿರುವ ಕೆಲವು ಘಟನೆಗಳಲ್ಲಿ ಈ ಕೆಳಗಿನದು ಒಂದು.

ಶ್ರೀವಿದ್ಯಾಮಾನ್ಯ ತೀರ್ಥರು ಬಾಲ ಮೇಧಾವಿಗಳು. ಮಧ್ವಶಾಸ್ತ್ರಕ್ಕೆ ಅವರು ತೋರಿದ ನಿಷ್ಠೆ ಅನನ್ಯ. ತಮ್ಮ ಗುರುಗಳಲ್ಲಿ ಸುಧಾಮಂಗಳವಾದ ನಂತರ ಉತ್ತರಾದಿಮಠದ ಸತ್ಯಧ್ಯಾನತೀರ್ಥರಲ್ಲಿ ಸುಧೆಯ ಪುನರ್ಮನನ ಹಾಗು ಚಿಂತನೆಗಾಗಿ ಹಲವಾರು ವರ್ಷವಿದ್ದ್ದದ್ದು ಬಹಳ ಜನಕ್ಕೆ ತಿಳಿದಿರುವ ವಿಷಯ. ಈ ಚಿಂತನೆ ಗಹನವಾಗಿ ನಡೆಯುತ್ತಿರುವಾಗಲೇ ಒಮ್ಮೆ ಅವರ ಮನದಲ್ಲಿ ಒಂದು ಅಭಿಪ್ರಾಯ ಉಂಟಾಯಿತು. ಅದೇನೆಂದರೆ, ಇಂಗ್ಲೀಷು ಭಾಷೆಯನ್ನು ಕಲಿಯುವುದು!. ಅದರ ಮೂಲಕ ಮಧ್ವಶಾಸ್ತ್ರದ ಸುವಾಸನೆಯನ್ನು ಇಂಗ್ಲೀಷಿನಲ್ಲಿಯೂ ಹೊರತರಬಹುದಲ್ಲ ಎನ್ನುವುದೇ ಇದರ ಹಿಂದೆ ಇದ್ದ ಸದಾಶಯವಾಗಿತ್ತು. ನೆನಪಿರಲಿ, ಈ ಅಭಿಪ್ರಾಯ ಅವರಿಗೆ ಉಂಟಾದಾಗ ಅವರಿಗೆ ಸುಮಾರು ೪೦ ವರ್ಷಗಳಷ್ಟು ವಯಸ್ಸಾಗಿತ್ತು. ಚಿಕ್ಕ ವಯಸ್ಸಿದ್ದಾಗಲೇ ಓದಬೇಕು ಎನ್ನುವ ಹಿಂಜರಿಕೆಯೆಲ್ಲ ಅವರಿಗೆ ಇರಲಿಲ್ಲ. ಸರಿ ಎ.ಬಿ.ಸಿ.ಡಿ. ಪ್ರಾರಂಭವಾಯಿತು. ಸ್ಲೇಟು ಬಳಪದಲ್ಲಿಯೇ ಇದನ್ನು ಪ್ರಾರಂಭಿಸಿದರು.

ಕೆಲದಿನಗಳಲ್ಲಿಯೇ ಇದು ಕೆಲವು ವಿದ್ವಾಂಸರಿಗೆ ಗೊತ್ತಾಯಿತು. ಅವರು ಬಂದರು. “ಏನು ಸ್ವಾಮಿ ನೀವು ಮಾಡುತ್ತಿರುವ ಕೆಲಸ?” ಎಂದು ಕೇಳಿದರು. ವಿದ್ಯಾಮಾನ್ಯರ ಉತ್ತರ ಅವರಿಗೆ ಹಿಡಿಸಲಿಲ್ಲ. ಅದಕ್ಕೆ ಅವರು ಹೇಳಿದರು. “ಅದರ ಅಗತ್ಯವಾದರೂ ಏನು?” “ನಿಮ್ಮಂತಹವರು ಈ ರೀತಿಯಾದ ಕೆಲಸ ಮಾಡುತ್ತೀರೆಂದು ನಾವು ಎಣಿಸಿರಲಿಲ್ಲ.”. ಈ “ಈ ರೀತಿಯಾದ ಕೆಲಸ” ಎನ್ನುವ ಮಾತು ಶ್ರೀವಿದ್ಯಾಮಾನ್ಯರನ್ನು ಗೊಂದಲದಲ್ಲಿ ಕೆಡವಿತು. “ಏನು ಹಾಗೆಂದರೆ” ಎಂದು ವಿದ್ವಾಂಸರನ್ನು ಪ್ರಶ್ನಿಸಿದರು. ಆಗ ವಿದ್ವಾಂಸರು ಹೇಳಿದರು. “ನೀವು ಸಂನ್ಯಾಸಿಗಳು. ಇಂಗ್ಲೀಷನ್ನು ಕಲಿಯುವುದಾಗಲಿ ಮಾತನಾಡುವುದಾಗಲಿ ಸಲ್ಲದು. ನೀವು ಇಂಗ್ಲೀಷನ್ನು ಕಲಿಯಲು ಪ್ರಾರಂಭಿಸಿದಿರಿ ಹಾಗಾಗಿ ವಿಶ್ವದಲ್ಲಿ ಯುದ್ಧವು ಪ್ರಾರಂಭವಾಗಿದೆ” ಎಂದು. ಆಗ ಎರಡನೆಯ ವಿಶ್ವಯುದ್ಧವು ಘೋಷಿಸಲ್ಪಟ್ಟಿತ್ತು. ವಿದ್ವಾಂಸರು ಆ ವಾರ್ತೆ ಮುದ್ರಿತವಾಗಿದ್ದ ಪೇಪರನ್ನು ಶ್ರೀಗಳವರಿಗೆ ತೋರಿಸಿ ತಮ್ಮ ಮಾತಿಗೆ “ಆಧಾರವನ್ನು” ಒದಗಿಸಿಕೊಂಡರು! ಈ ಯುದ್ಧದ ಹಿನ್ನೆಲೆಯನ್ನೇ ತಿಳಿಯದಿದ್ದ ೪೦ವರ್ಷ ವಯಸ್ಸಿನ ಆ ಮಗುವು “ಅಯ್ಯೋ! ದೇವರೆ!, ನನ್ನಿಂದ ಜಗತ್ತು ಘೋರ ಪರಿಣಾಮಕ್ಕೆ ಒಳಗಾಗುವುದಾದಲ್ಲಿ ಇಂಗ್ಲೀಷನ್ನು ಕಲಿಯುವುದರ ಹವ್ಯಾಸವೇ ಬೇಡ” ಎಂದು ಸ್ಲೇಟು ಮತ್ತು ಬಳಪಗಳಿಗೆ ನಿವೃತ್ತಿಯನ್ನು ದಯಪಾಲಿಸಿಬಿಟ್ಟಿತು.

ಘಟನೆ ಏನೋ ಚಿಕ್ಕದೇ. ಆದರೆ ಸಾವಕಾಶವಾಗಿ ಆಲೋಚನೆ ಮಾಡಿದರೆ ಮುಗ್ದತೆ ಮತ್ತು ದಡ್ಡತನಗಳಿಗೆ ವ್ಯತ್ಯಾಸ ಇದೆ ಎನ್ನುವ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ. ಮಹಾ ಮೇಧಾವಿಗಳಾದ ವಿದ್ಯಾಮಾನ್ಯರು ತಮ್ಮ ಜೀವನವನ್ನೆಲ್ಲ ಆಚಾರ್ಯ ಮಧ್ವರ ಶಾಸ್ತ್ರವನ್ನು ಅಧ್ಯಯನ ಮಾಡುವುದಕ್ಕೇ ಮೀಸಲಾಗಿ ಇಟ್ಟಿದ್ದರು. ಈ ಅಧ್ಯಯನ ಶೀಲತೆಯಿಂದಾಗಿ ಲೌಕಿನ ಜಗತ್ತಿನ ವ್ಯವಹಾರಗಳಿಗೆ ಅವರ ಜೀವನದಲ್ಲಿ ಗೌಣವಾದ ಪಾತ್ರ ದೊರಕಿತ್ತು. ಲೌಕಿಕ ವ್ಯವಹಾರ ನೈಪುಣ್ಯವೆನ್ನುವುದು ಬ್ರಹ್ಮವಿದ್ಯೆಯೇನೂ ಅಲ್ಲವಲ್ಲ? ಆದರೆ ಅದೇ ಅವರಿಗೆ ಮುಖ್ಯವಾಗಿಲ್ಲವಾದ್ದರಿಂದ ಲೌಕಿಕದ ಪ್ರಶ್ನೆ ಬಂದಾಗ ಎದುರಿನ ವ್ಯಕ್ತಿ ಹೇಳಿದ್ದ್ದನ್ನು ಅವರು ನಂಬಿದರು. ಆ ಮುಗ್ಧತೆಯನ್ನು ತಮ್ಮ ಕಾರ್ಯಕ್ಕಾಗಿ ಬಳಸಿಕೊಂಡ ವಿದ್ವಾಂಸರು ಮನಸ್ಸಿನಲ್ಲೇ ಹಿರಿ ಹಿರಿ ಹಿಗ್ಗುವ ದಡ್ಡತನವನ್ನು ಮಾಡಿದರು. ಜ್ಞಾನನಿಧಿಯೊಂದು ಕೈಗೆ ಸಿಕ್ಕಾಗ ಅದನ್ನು ಬಳಸಿಕೊಳ್ಳದೆ ನಿಧಿಯ ಪ್ರಕಾಶವನ್ನೇ ಮುಚ್ಚುವ ಪ್ರಯತ್ನ ಮಾಡುವುದು ದಡ್ಡತನವೇ ಅಲ್ಲವೆ? (ಮೂರ್ಖತನವೆನ್ನುವುದು ಸರಿಯಾದ ಶಬ್ದ)

ಇಂಗ್ಲೀಷು ಓದಿದರೆ ಜಗತ್ತಿನಲ್ಲಿ ಯುದ್ಧವಾಗುತ್ತದೆ ಎಂಬ ಮಾತನ್ನು ಪರಿಶೀಲನೆ ಸಹ ಮಾಡದೆ ಓದುವುದನ್ನೇ ಬಿಟ್ಟರು ಎನ್ನುವ ಮಾತು ಇತರರಿಗೆ ದಡ್ಡತನ ಎಂದೇ ಅನ್ನಿಸಬಹುದು.  ಆದರೆ ಅದು ದಡ್ಡತನವಲ್ಲ; ಮುಗ್ಧತೆ. ಹಸುಗೂಸಿನ ಮನಸ್ಸಿನ ವ್ಯಕ್ತಿಯೋರ್ವನಿಗೆ ದಾರಿತಪ್ಪಿಸುವ ಮಾತನ್ನು ಹೇಳಿದರೆ ಆ ವ್ಯಕ್ತಿ ನಂಬಿಯೇ ನಂಬುತ್ತಾನೆ. ಆದರೆ ಆ ರೀತಿ ದಾರಿ ತಪ್ಪಿಸುವ ಮನಸ್ಸಿಗೆ ಏನೆಂದು ಹೇಳಬೇಕು?  ಸರಳಮನಸ್ಕರನ್ನು ಮೋಸಗೊಳಿಸಿ ಪಡುವ ಆನಂದ ತಾಮಸವಲ್ಲದೆ ಇನ್ನೇನು?

ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗುವುದೇನೂ ಕಷ್ಟವಲ್ಲ. ಮೋಸವನ್ನು ಯಾಕೆ ಮಾಡಿದರು ಎನ್ನುವುದನ್ನು ಸುಲಭವಾಗಿಯೇ ತಿಳಿದುಕೊಳ್ಳಬಹುದು. ಆದರೆ ಉತ್ತರ ಸಿಗದೇ ಉಳಿಯುವ ಪ್ರಶ್ನೆಯೊಂದಿದೆ.

ವಿದ್ಯಾಮಾನ್ಯರಂತಹ ನಿಷ್ಕಲ್ಮಶಚಿತ್ತರಿಗೂ ಈ ರೀತಿ ಮೋಸ ಮಾಡಿದ ವಿದ್ವಾಂಸರು ಯಾರು?

ವಿದ್ಯಾಮಾನ್ಯತೀರ್ಥರ ಮನಸ್ಸನ್ನು ಪ್ರತಿನಿಧಿಸುವ ಕರುವಿನ ಚಿತ್ರ : ಇಲ್ಲಿಂದ ತೆಗೆದುಕೊಂಡಿದ್ದು http://www.karunasociety.org/

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.