ಶ್ರೀಷೋಡಶಬಾಹು ನರಸಿಂಹದೇವರ ಪ್ರತಿಮೆ ಹಾಗು ಅಷ್ಟಕದ ಹಿನ್ನೆಲೆ.

ದ್ವೈತಮತದ ಯತಿಶ್ರೇಷ್ಠರುಗಳಲ್ಲಿ ಶ್ರೀವಿಬುಧೇಂದ್ರತೀರ್ಥರು ಧೃವನಕ್ಷತ್ರದಂತೆ ಕಂಗೊಳಿಸುತ್ತಿರುವ ಮಹಾ ಪ್ರತಿಭಾಸಂಪನ್ನರು. ಇವರ ಕಾಲ ೧೪ನೆಯ ಶತಮಾನ. ಇವರು ಪ್ರತಿನಿತ್ಯ ದ್ವೈತಮತವನ್ನು ಸ್ಥಾಪನೆ ಮಾಡಿದ ನಂತರವೇ ಪೂಜಾದಿಗಳನ್ನು ಮಾಡಿ ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಮಹಾತ್ಮರು. ಪ್ರತಿವಾದಿಗಳನ್ನು ಜಯಿಸಿ ಅವರಿಂದ ದ್ವೈತಮತಕ್ಕೆ ಒಂದು ಜಯಪತ್ರವನ್ನು ಬರೆಸಿಕೊಂಡು ಅದನ್ನೆ ಭಗವಂತನಿಗೆ ಹೂವಿನಂತೆ, ನೈವೇದ್ಯದಂತೆ ಸಮರ್ಪಿಸುತ್ತಿದ್ದ ದೀಕ್ಷಾಬದ್ಧರು. ಉತ್ತರಭಾರತದಲ್ಲಿ ಆಚಾರ್ಯ ಮಧ್ವರ ಸಿದ್ಧಾಂತದ ಬೀಜಬಿತ್ತಿದ ಮಹಾನುಭಾವರು ಇವರೇ.

ನೃಸಿಂಹದೇವರ ಉಪಾಸಕರಾಗಿದ್ದ ಇವರು ನಿರಂತರವಾಗಿ ಅನೇಕ ವರ್ಷಗಳ ಅಹೋಬಲದಲ್ಲಿ ನರಸಿಂಹದೇವರನ್ನು ಸೇವಿಸಿದರು. ಅದರ ಫಲವಾಗಿ ಇವರಿಗೆ ಸ್ವಪ್ನಸೂಚನೆಯಾಗಿ ಅಲ್ಲಿನ ನದಿಯಲ್ಲಿ (ಭವನಾಶಿನೀ ನದಿ)* ಹದಿನಾರು ಕೈಯುಳ್ಳ ನರಸಿಂಹದೇವರ ವಿಗ್ರಹವೊಂದು ಇವರ ಕೈಗಳಲ್ಲಿ ಬಂದು ಸೇರಿತು. ಇದೇ ಪ್ರಖ್ಯಾತವಾದ ಶ್ರೀ ಷೋಡಶಬಾಹುನೃಸಿಂಹದೇವರ ವಿಗ್ರಹ. ಇಂದಿಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪೂಜೆಗೊಳ್ಳುತ್ತಿದೆ.

ನರಸಿಂಹದೇವನು ಹಿರಣ್ಯಕಶಿಪುವನ್ನು ಕೊಂದ ಬಗೆಯು ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಬೇರೆ ರೀತಿ ವರ್ಣಿತವಾಗಿದೆ. ಆ ರೀತಿಯಾದ ಬೇರೆ ಬೇರೆ ಪ್ರತಿಮೆಗಳನ್ನು ನಾವು ಬೇರೆಡೆ ನೋಡಿರಬಹುದು. ಆದರೆ ಭಾಗವತದಲ್ಲಿ ವರ್ಣಿಸಿರುವ ಪ್ರಕಾರವೇ ನಿರ್ಮಿತವಾಗಿರುವ ಈ ಪ್ರತಿಮೆಯು ಅಪರೂಪದಲ್ಲಿ ಅಪರೂಪವಾದದ್ದು. ಈ ವಿಗ್ರಹವು ಸುಮಾರು ೧೨ ಅಂಗುಲಗಳಷ್ಟು ದೊಡ್ಡದು. ಭಾಗವತದಲ್ಲಿ ಹೇಳಿರುವ ಪ್ರಕಾರವೇ ಈ ಪ್ರತಿಮೆಯ ಕೈಗಳಲ್ಲಿ ಆಯುಧಗಳನ್ನು ನಾವು ನೋಡಬಹುದು. ಇಲ್ಲಿ ನರಸಿಂಹದೇವನು ರುದ್ರ ಮನೋಹರವಾದ ತನ್ನ ಹದಿನಾಲ್ಕು ಕೈಗಳಲ್ಲಿ ವಿಚಿತ್ರವಾದ ಆಯುಧಗಳನ್ನು ಹಿಡಿದುಕೊಂಡು, ಇನ್ನೆರಡು ಕೈಗಳಲ್ಲಿ ತನ್ನ ಉಗುರುಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡು ತೊಡೆಗಳ ಮೇಲೆ ಹರಿದ್ವೇಷಿಯಾದ ಹಿರಣ್ಯಕಶಿಪುವನ್ನು ಅಡ್ಡಡ್ಡ ಮಲಗಿಸಿಕೊಂಡು ಅವನನ್ನು ಸಂಹರಿಸುತ್ತಿದ್ದಾನೆ. ಸಂಹಾರಕ್ಕೀಡಾಗುತ್ತಿರುವಾಗ ಮೂಡುವ ಆರ್ತಭಾವ ಸಹ ಈ ಹಿರಣ್ಯಕಶಿಪುವಿನ ಮುಖದಲ್ಲಿ ಕಾಣಿಸುತ್ತದೆ. ಭಾಗವತದ ಆ ವರ್ಣನೆಯೇ ಪ್ರತಿಮೆಯಾಕಾರವಾಗಿದೆ ಎನ್ನುವಷ್ಟು ಸಹಜವಾಗಿದೆ ಈ ನರಸಿಂಹದೇವರ ವಿಗ್ರಹ.

ಈ ನೃಸಿಂಹದೇವರನ್ನು ಉಪಾಸಿಸಿ ತನ್ಮೂಲಕ ಅದರ ವಿಷಪ್ರಯೋಗದಂತಹ ಅಪಾಯದಿಂದ ಸಹ ಪಾರಾಗಬಹುದು ಎಂದು ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ತಮ್ಮ ಮೇಲೆಯೇ ಆ ಪ್ರಯೋಗವನ್ನು ಮಾಡಿಕೊಂಡು ತೋರಿಸಿಕೊಟ್ಟಿದ್ದಾರೆ.

ವಿಜಯೀಂದ್ರತೀರ್ಥರು (೧೫೭೫-೧೬೧೪) ಶ್ರೀರಾಘವೇಂದ್ರತೀರ್ಥರ ಪರಮ ಗುರುಗಳು. ೬೪ ಕಲೆಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಮಹಾಪುರುಷರು. ಇವರನ್ನು ಮುಜುಗರಕ್ಕೀಡು ಮಾಡುವ ನೂರಾರು ಪ್ರಯತ್ನಗಳು ನಡೆದರೂ ಅವನ್ನೆಲ್ಲ ಧೀಮಂತವಾಗಿ ಮೆಟ್ಟಿನಿಂತು ಸಾತ್ವಿಕತೆಯನ್ನು ಎತ್ತಿ ಹಿಡಿದ ಉದಾತ್ತರು ಇವರು. ಉತ್ತರದೇಶದ ಒಬ್ಬ ವಿದ್ವಾಂಸರು, ಗಂಗಾಧರ ಶರ್ಮರು ಇವರೊಡನೆ ವಾದ ಮಾಡಿ ತಮ್ಮ ಮತವನ್ನು ಸ್ಥಾಪಿಸಲು ಬಂದರು. ಬಂದದ್ದೇನೊ ಮತಸ್ಥಾಪನೆಗೆ. ಆದರೆ ಮುಂದೆ ನಡೆದದ್ದು ಅನಿರೀಕ್ಷಿತವಾದ ಮನಃ ಪರಿವರ್ತನೆ ಹಾಗು ಒಂದು ಪವಾಡ.

ಗಂಗಾಧರಶರ್ಮರೊಡನೆ ವಾದ ಪ್ರಾರಂಭವಾದಾಗ ವಾಸ್ತವವಾಗಿ ಅವರೇ ಪೂರ್ವಪಕ್ಷವನ್ನು ಆರಂಭಿಸಬೇಕಿತ್ತು. ಆದರೆ ಅವರ ಮನೋಗತವನ್ನು ತಿಳಿದುಕೊಂಡಿದ್ದ ಶ್ರೀಗಳವರು ಅದನ್ನು ಸಹ ತಾವೆ ಮೊದಲು ಮಾಡಿಬಿಟ್ಟರು. ಈ ವಿದ್ವಾಂಸರಿಗೆ ಆಶ್ಚರ್ಯವಾಯಿತು. ತನ್ನ ಮನಸ್ಸಿನ ಮಾತನ್ನು ಇವರೇ ಹೇಳುತ್ತಿದ್ದಾರೆ, ಇವರೇ ತನ್ನ ಸಮರ್ಥನೆಯನ್ನೂ ಕೊಡುತ್ತಿದ್ದಾರಲ್ಲ? ಇನ್ನು ಇವರ ಸಮಾಧಾನವೇನಿರಬಹುದು? ನನ್ನ ಮತವನ್ನು ನಿರಾಕರಿಸಿ ತಮ್ಮ ಮತವನ್ನು ಹೇಗೆ ಸ್ಥಾಪಿಸಲಿದ್ದಾರೆ ಎನ್ನುವ ಆಲೋಚನೆಯಲ್ಲಿ ಬಿದ್ದರು! ಆಗ ಪೂರ್ವ ಪಕ್ಷ ಮುಗಿದು ಉತ್ತರ ಪಕ್ಷ ಆರಂಭವಾಯಿತು. ಮಾತ್ರವಲ್ಲ ಗಂಗಾಧರ ಶರ್ಮರ ಮಾತು ಮತ್ತು ಯುಕ್ತಿಗಳೆಲ್ಲ ಶ್ರೀವಿಜಯೀಂದ್ರತೀರ್ಥರ ಸಮರ್ಥವಾದ ಮಾತಿನೆದುರು ನಿಲ್ಲಲೇ ಇಲ್ಲ. ಅವರಿಗೆ ಶ್ರೀಗಳವರ ಮಾತನ್ನು ಒಪ್ಪದೆ ಬೇರೆ ವಿಧಿ ಉಳಿಯಲಿಲ್ಲ.

ವಿಜಯೀಂದ್ರರು ಇನ್ನೂ ಒಂದು ಮಾತನ್ನು ಹೇಳಿ ಎಲ್ಲರನ್ನೂ ಬೆರಗುಗೊಳಿಸಿದರು. ಆ ಮಾತು ಗಂಗಾಧರ ಶರ್ಮರನ್ನು ಉದ್ದೇಶಿಸಿ ಇತ್ತು. “ನೀವು ಯಾವ ವಿಷಯದ ಮೇಲೆ ವಾದ ಮಾಡಬೇಕು ಎಂದುಕೊಂಡಿದ್ದಿರೋ ಅದು ಮಾತ್ರವೇ ನಮಗೆ ತಿಳಿದಿದೆ ಎಂದುಕೊಳ್ಳಬೇಡಿ. ನೀವು ವಾದದಲ್ಲಿ ನಿರುತ್ತರರಾದ ಮೇಲೆ ನಮ್ಮ ಮೇಲೆ ನಿಮ್ಮೊಡನೆ ತಂದಿರುವ ವಿಷವನ್ನು ಪ್ರಯೋಗಿಸಬೇಕು, ತನ್ಮೂಲಕ ನಿಮ್ಮ ಸಿದ್ಧಾಂತವನ್ನು ಮೀರಿದವರ ಕಥೆ ಏನಾಗುತ್ತದೆ ಎಂದು ತೋರಿಸಬೇಕು ಎಂಬ ನಿಮ್ಮ ಅಭಿಪ್ರಾಯ ಸಹ ನಮಗೆ ತಿಳಿದಿದೆ. ಆದರೆ ಇದನ್ನು ನಾವು ಶ್ರೀಹರಿಯ ಇಚ್ಛೆ ಎನ್ನುವ ಅಭಿಪ್ರಾಯದಿಂದ ಪರಿಗಣಿಸುತ್ತೇವೆ. ನಮ್ಮ ನಿಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದರೂ ಸಹ ವೈದಿಕ ಸಂಸ್ಕೃತಿಯ ರಕ್ಷಣೆಯೆ ನಮ್ಮನಿಮ್ಮೆಲ್ಲರ ಆದ್ಯತೆಯಾಗಿದೆ. ಆದ್ದರಿಂದ ನಿಮ್ಮ ಮೇಲೆ ವಯಕ್ತಿಕವಾಗಿ ನಾವು ದೋಷಾರೋಪಣೆ ಮಾಡುವುದಿಲ್ಲ. ನಮ್ಮ ಮಾತನ್ನು ನಿಜಗೊಳಿಸಲು ಕಾಶಿಯ ವಿಶ್ವನಾಥನೇ ಮಾಡುತ್ತಿರುವ ಪರೀಕ್ಷೆ ಇದು. ಕೊಡಿ ಆ ವಿಷವನ್ನು, ಅದರಲ್ಲೂ ನಾವು ಗೆಲ್ಲುತ್ತೇವೆ”

ಈ ಮಾತನ್ನು ಕೇಳಿ ಗಂಗಾಧರ ಶರ್ಮರು ಗದ್ಗದಿತರಾಗಿಬಿಟ್ಟರು. ಅವರು ಹೇಳಿದರು. ಮಹಾಸ್ವಾಮಿ! ನಿಮ್ಮ ನೈಜ ಸಾಮರ್ಥ್ಯ ಹಾಗು ವ್ಯಕ್ತಿತ್ವವನ್ನು ನಾನು ಅರಿಯದೆ ದುಡುಕಿದ್ದೇನೆ. ನಾನು ಆ ವಿಷವನ್ನು ಕೊಡಲಾರೆ. ನನ್ನನ್ನು ಕ್ಷಮಿಸಿ ಎಂದು ಪ್ರಾರ್ಥಿಸಿದರು. ಆದರೂ ವಿಜಯೀಂದ್ರರು ಆ ವಿಷವನ್ನು ತರಿಸಿ ಹಾಲಿನಲ್ಲಿ ಮಿಶ್ರಮಾಡಿ ಕುಡಿದರು. ಅತಿ ಘೋರವಾಗಿದ್ದ ಆ ವಿಷ ತನ್ನ ಪ್ರಭಾವವನ್ನು ನಿಧಾನವಾಗಿ ಗುರುಗಳ ಶರೀರದ ಮೇಲೆ ಪ್ರಭಾವವನ್ನು ತೋರತೊಡಗಿತು. ಮುಖ ಮಾತ್ರ ತನ್ನ ಎಂದಿನ ಉಜ್ವಲ ತೇಜಸ್ಸನ್ನು ಉಳಿಸಿಕೊಂಡಿದೆ. ನೆರೆದಿದ್ದ ಭಕ್ತರು ಹೌಹಾರಿದರೂ ಶ್ರೀಗಳವರು ಸಮಾಧಾನವಾಗಿದ್ದರು. ತಮ್ಮ ಕಂಚಿನ ಕಂಠದಲ್ಲಿ ಅಪೂರ್ವವಾದ ಬೀಜಮಂತ್ರಗಳನ್ನು ರಾಗಬದ್ದವಾಗಿ ಪೋಣಿಸಿ ಶ್ರೀಮಠಕ್ಕೆ ಪರಂಪರಾಪ್ರಾಪ್ತವಾದ ಶ್ರೀಷೋಡಶಬಾಹುನರಸಿಂಹದೇವರನ್ನು ಸ್ತುತಿಸಿದರು. ಶ್ರೀಹರಿಯ ಕರುಣೆ ತನ್ನ ಪ್ರಭಾವತೋರತೊಡಗಿತು. ಪ್ರತಿಯೊಂದು ಶ್ಲೋಕಕ್ಕೂ ಸಹ ಒಂದಿಷ್ಟು ವಿಷ ಇಳಿಯುತ್ತಾ ಬಂತು. ಕಪ್ಪಾಗಿ ಹೋಗಿದ್ದ ಶರೀರ ನಿಧಾನಕ್ಕೆ ಸಹಜವರ್ಣಕ್ಕೆ ತಿರುಗತೊಡಗಿತು. ಒಂಬತ್ತನೆಯದಾದ ಫಲಸ್ತುತಿಯನ್ನು ಹೇಳುವಷ್ಟರಲ್ಲಿ ಗುರುಗಳ ದೇಹದಲ್ಲಿದ್ದ ಕೊನೆಯಹನಿ ವಿಷವೂ ಸಹ ಇಳಿದು ಹೋಯಿತು. ಜನ ಈ ಘಟನೆಯನ್ನು ನೋಡಿ ಸೋಜಿಗಪಟ್ಟರು. ತಮ್ಮ ಗುರುಗಳ ಮಹಿಮೆಯನ್ನು ನೋಡಿ ಹಿಗ್ಗಿದರು.

ನಂತರ ಇನ್ನೂ ಒಂದು ಚಮತ್ಕಾರ ನಡೆಯಿತು. ಶ್ರೀಗಳವರು ಆ ಪ್ರತಿಮೆಯನ್ನು ಪೂಜಿಸಲು ವಸ್ತ್ರವನ್ನು ತೆಗೆದಾಗ ಅವರ ಕಣ್ಣುಗಳಿಂದ ಆನಂದದ ಅಶ್ರು ಮೂಡಿಬಂದಿತು! ನೆರೆದ ವಿದ್ವಾಂಸರು ಹಾಗು ಭಕ್ತರಿಗೆ ಕುತೂಹಲವಾಯಿತು. ಏಕಿದು? ಎಂಬುದಾಗಿ! ಆಗ ಗುರುಗಳು ಪ್ರತಿಮೆಯ ಕಂಠ ಪ್ರದೇಶವನ್ನು ತೋರಿಸುತ್ತಾರೆ, ನಿನ್ನೆಯವರೆಗೆ ತಾಮ್ರವರ್ಣದ್ದಾಗಿದ್ದ ಶ್ರೀನೃಸಿಂಹದೇವರ ಪ್ರತಿಮೆಯ ಕಂಠವು ಇಂದು ನೀಲವರ್ಣಕ್ಕೆ ತಿರುಗಿತ್ತು! ನೆಚ್ಚಿನ ಭಕ್ತನ ದೇಹದಲ್ಲಿ ಸೇರಿದ್ದ ವಿಷವನ್ನು ನರಸಿಂಹದೇವನು ತಾನು ಸೆಳೆದು ತನ್ನ ಕಂಠದಲ್ಲಿ ಇರಿಸಿಕೊಂಡಿದ್ದ. (ಈ ನೀಲವರ್ಣದ ಕುರುಹು “ನಾನು ಭಕ್ತರ ವಿಷಹರಣ ಮಾಡಬಲ್ಲೆ ಎನ್ನುವುದಕ್ಕೆ ದ್ಯೋತಕ ಮಾತ್ರ. ವಿಷವು ಸರ್ವೋತ್ತಮನ ಮೇಲೆ ಯಾವುದೇ ವಿಕಾರವನ್ನು ಉಂಟು ಮಾಡದು.)

ಗಂಗಾಧರ ಶರ್ಮರು ತಮ್ಮ ಅಹಂಕಾರವನ್ನು ಬಿಟ್ಟು ಶ್ರೀಗಳವರನ್ನು ಕೊಂಡಾಡಿದರು. ಶ್ರೀಗಳವರಾದರೂ ಗಂಗಾಧರ ಶರ್ಮರಿಗೆ ಮುಜುಗರವಾಗದಂತೆ ಅವರನ್ನು ಸಂಮಾನಿಸಿ ಕಳುಹಿಸಿಕೊಟ್ಟರು. ನೆರೆದ ಜನ ಶ್ರೀನರಸಿಂಹದೇವರು ತಮ್ಮ ಗುರುಗಳ ಮೇಲೆ ಮಾಡಿದ ವಾತ್ಸಲ್ಯವನ್ನು ಕಂಡು ಆನಂದಿಸಿದರು.

ಶ್ರೀಗಳವರು ಆಗ ರಚಿಸಿದ ಶ್ರೀನರಸಿಂಹದೇವರ ಸ್ತುತಿಯು “ಶ್ರೀಷೋಡಶಬಾಹು ನೃಸಿಂಹಾಷ್ಟಕ” ಎಂದು ಪ್ರಸಿದ್ಧವಾಗಿದೆ. ಅತ್ಯಂತ ಪ್ರಭಾವಶಾಲಿ ಮಂತ್ರಗಳ ಸಮೂಹ ಈ ಅಷ್ಟಕ. ಬೀಜಾಕ್ಷರಗಳಿಂದಲೇ ಕೂಡಿದ ಸ್ತುತಿಯಾದ್ದರಿಂದ ಜಾಗ್ರತೆಯಾಗಿ ಪಠಿಸಬೇಕು. ಗುರುಮುಖದಿಂದಲೇ ಕಲಿಯಬೇಕು.

ಅಷ್ಟಕ

ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ
ಡಿಂ ಡಿಂ ಡಿಂ ಡಿಂ ಡಿಡಿಂಬಂ ದಹಮಪಿದಹಮೈರ್ಝಂಪರ್ಝಂಪೈಶ್ಚ ಝಂಪೈಃ |
ತುಲ್ಯಾಸ್ತುಲ್ಯಾಸ್ತುತುಲ್ಯಾಃ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈಃ
ಏತತ್ತೇ ಪೂರ್ಣಯುಕ್ತಂ ಅಹರಹಕರಹಃ ಪಾತು ಮಾಂ ನಾರಸಿಂಹಃ || ೧ ||

ಭೂಭೃದ್ಭೂಭೃದ್ಭುಜಂಗಂ ಪ್ರಲಯರವವರಂ ಪ್ರಜ್ವಲದ್ಜ್ವಾಲಮಾಲಂ
ಖರ್ಜರ್ಜಂ ಖರ್ಜದುರ್ಜಂ ಖಿಖಚಖಚಖಚಿತ್ಖರ್ಜದುರ್ಜರ್ಜಯಂತಮ್ |
ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮತ್ಯುಗ್ರಗಂಡಂ
ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ || ೨ ||

ಏನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚಂದ್ರಾರ್ಕದಂಷ್ಟ್ರೋ
ಹೇಮಾಂಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತು ಭೀತಿಃ |
ದಂತಾನಾಂ ಬಾಧಮಾನಾಂ ಖಗಟಖಗಟವೋ ಭೋಜಜಾನುಸ್ಸುರೇಂದ್ರೋ
ನಿಷ್ಪ್ರತ್ಯೂಹಂ ಸ ರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ || ೩ ||

ಶಂಖಂ ಚಕ್ರಂ ಚ ಚಾಪಂ ಪರಶುಮಿಷುಮಸಿಂ ಶೂಲಪಾಶಾಂಕುಶಾಸ್ತ್ರಂ
ಬಿಭ್ರಂತಂ ವಜ್ರಖೇಟಂ ಹಲಮುಸಲಗದಾಕುಂತ್ಯಮತ್ಯುಗ್ರದಂಷ್ಟ್ರಮ್ |
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರ ಭೂಷಂ
ವಂದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ || ೪ ||

ಪಾದದ್ವಂದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಢ್ವಮೂರುಂ
ನಾಭಿರ್ಬ್ರಹ್ಮಾಂಡಸಿಂಧುಃ ಹೃದಯಮಪಿ ಭವೋ ಭೂತವಿದ್ವತ್ಸಮೇತಃ
ದುಶ್ಚಕ್ರಾಂಕಂ ಸ್ವಬಾಹುಂ ಕುಲಿಶನಖಮುಖಂ ಚಂದ್ರಸೂರ್ಯಾಗ್ನಿನೇತ್ರಂ
ವಕ್ತ್ರಂ ವಹ್ನಿಸ್ಸುವಿದ್ಯುತ್ಸುರಗಣವಿಜಯಃ ಪಾತು ಮಾಂ ನಾರಸಿಂಹಃ || ೫ ||

ನಾಸಾಗ್ರಂ ಪೀನಗಂಡಂ ಪರಬಲಮಥನಂ ಬದ್ಧಕೇಯೂರಹಾರಂ
ರೌದ್ರಂ ದಂಷ್ಟ್ರಾಕರಾಲಂ ಅಮಿತಗುಣಗಣಂ ಕೋಟಿಸೂರ್ಯಾಗ್ನಿ ನೇತ್ರಮ್ |
ಗಾಂಭೀರ್ಯಂ ಪಿಂಗಲಾಕ್ಷಂ ಭ್ರುಕುಟಿತ ವಿಮುಖಂ ಷೋಡಶಾರ್ಧಾರ್ಧಬಾಹುಂ
ವಂದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ || ೬ ||

ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತ್ವಂ ಗೃಹೀತ್ವಾ
ದೇವಂದ್ಯೋ ವಿಪ್ರದಂದಂ ಪ್ರತಿವಚನಪಯಾಯಾಮ್ಯನಪ್ರತ್ಯನೈಷೀಃ |
ಶಾಪಂ ಚಾಪಂ ಚ ಖಡ್ಗಂ ಪ್ರಹಸಿತವದನಂ ಚಕ್ರ ಚಕ್ರೀಚಕೇನ
ಓಮಿತ್ಯೇ ದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ || ೭ ||

ಝಂ ಝಂ ಝಂ ಝಂ ಝಕಾರಂ ಝುಷ ಝುಷ ಝುಷಿತಂ ಜಾನುದೇಶಂ ಝಕಾರಂ
ಹುಂ ಹುಂ ಹುಂ ಹುಂ ಹಕಾರಂ ಹರಿತಕಹಹಸಾ ಯಂ ದಿಶೇ ವಂ ವಕಾರಮ್ |
ವಂ ವಂ ವಂ ವಂ ವಕಾರಂ ವದನದಲಿತತಂ ವಾಮಪಕ್ಷಂ ಸುಪಕ್ಷಂ
ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾಂ ನಾರಸಿಂಹಃ || ೮ ||

ಭೂತಪ್ರೇತಪಿಶಾಚಯಕ್ಷಗಣಶಃ ದೇಶಾಂತದುಚ್ಚಾಟನಾ-
ಚ್ಚೋರವ್ಯಾಧಿಮಹಜ್ವರಂ ಭಯಹರಂ ಶತ್ರೃಕ್ಷಯಂ ನಿಶ್ಚಯಮ್ |
ಸಂಧ್ಯಾಕಾಲಜಪಂ ತಮಷ್ಟಕಮಿದಂ ಸದ್ಭಕ್ತಿಭೂರ್ವಾದಿಭಿಃ
ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ || ೯ ||

|| ಇತಿ ಶ್ರೀವಿಜಯೀಂದ್ರತೀರ್ಥವಿರಚಿತಾ ಶ್ರೀನೃಸಿಂಹಸ್ತುತಿಃ ||

ದರ್ಶನ

ಈ ಪ್ರತಿಮೆಯ ದರ್ಶನ ಸಾಧಾರಣವಾಗಿ ವರ್ಷಕ್ಕೊಮ್ಮೆ ನರಸಿಂಹ ಜಯಂತಿಯ ದಿನದಂದು ಮಾತ್ರ ಮಾಡಬಹುದು. ಆದರೆ, ಸೂರ್ಯ / ಚಂದ್ರ ಗ್ರಹಣವೇನಾದರೂ ಸಂಭವಿಸಿದಲ್ಲಿ ಗ್ರಹಣದ ಹಿಂದಿನ ಹಾಗು ನಂತರದ ದಿನಗಳಲ್ಲಿ ಸಹ ಪ್ರತಿಮೆಯ ದರ್ಶನದ ಭಾಗ್ಯ ದೊರಕುತ್ತದೆ.

ಪೂಜೆ ಹಾಗು ಮಹಾಭಿಷೇಕ

ಈ ಪ್ರತಿಮೆಯು ಪ್ರಾಚೀನಕಾಲದಿಂದಲೂ ಶ್ರೀಮಠದಲ್ಲಿ ಪೂಜೆಗೊಳ್ಳುತ್ತಿದೆ. ದೊಡ್ಡಗಾತ್ರದ ವಿಗ್ರಹವಾದ್ದರಿಂದ ಪ್ರತಿನಿತ್ಯದ ಪೂಜಾ ಕೈಂಕರ್ಯಗಳನ್ನು ಮಾಡುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿವರ್ಷದ ನರಸಿಂಹಜಯಂತಿಯ ದಿನದಂದು ವೈಭವೋಪೇತವಾದ ಮಹಾಪೂಜೆಯನ್ನು ಶ್ರೀನರಸಿಂಹದೇವರು ಕೈಗೊಳ್ಳುತ್ತಾನೆ. ಇದಕ್ಕೆ ಶ್ರೀನೃಸಿಂಹಜಯಂತೀ ಮಹಾಭಿಷೇಕ ಎಂದೇ ಹೆಸರು. ಶ್ರೀಗಳವರು ತಮ್ಮ ಸಂಚಾರದ ಅನುಕೂಲವನ್ನು ನೋಡಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಈ ಮಹಾಭಿಷೇಕವನ್ನು ನೆರವೇರಿಸುತ್ತಾರೆ.

ಮಹಾಭಿಷೇಕದ ಹಿಂದಿನ ದಿನವೇ ಸಕಲ ಏರ್ಪಾಟುಗಳನ್ನು ಮಾಡಿಕೊಂಡು ಶಾಸ್ತ್ರೋಕ್ತವಾಗಿ ಪಂಚಾಮೃತದ ಸಾಮಾಗ್ರಿಗಳಿಂದ ಹಾಗು ಎಳನೀರುಗಳಿಂದ ಪರಮಾತ್ಮನಿಗೆ ಪಂಚಾಮೃತಾಭಿಷೇಕವನ್ನು ಮಾಡುತ್ತಾರೆ. ನಂತರ ಆ ಪಂಚಾಮೃತವನ್ನು ಪ್ರತ್ಯೇಕಿಸಿ, ಪ್ರತಿಮೆಗೆ ಶುದ್ಧೋದಕದಿಂದ ಅಭಿಷೇಕವನ್ನು ಮಾಡಿ ಗಂಧವನ್ನು ಲೇಪಿಸಿ, ಪುನಃ ಪೂಜಿಸಿ ಗಂಧವನ್ನು ತೆಗೆದು ಪ್ರತಿಮೆಯನ್ನು ಕೃಷ್ಣಾಜಿನದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸುತ್ತ್ತಾರೆ. ಭಕ್ತರಿಗೆ ಪ್ರಸಾದ ರೂಪವಾಗಿ ಪಂಚಾಮೃತ ಹಾಗು ಗಂಧವನ್ನು ಕೊಡುತ್ತಾರೆ.

ಶ್ರೀಮಠದ ಪರಂಪರೆಯ ಶ್ರೀಭುವನೇಂದ್ರತೀರ್ಥರಿಂದ (೧೭೮೫-೧೭೯೯) ಯತ್ಯಾಶ್ರಮವನ್ನು ಸ್ವೀಕರಿಸಿದ ಇನ್ನೋರ್ವ ವೈರಾಗ್ಯ ಶಿಖಾಮಣಿಗಳಾದ ಶ್ರೀವ್ಯಾಸತತ್ವಜ್ಞತೀರ್ಥರು ಈ ಪ್ರತಿಮೆಯನ್ನು ಬಹುಕಾಲ ಪೂಜಿಸಿದ್ದಾರೆ ಎಂಬುದನ್ನೌ ನಾವು ಇತಿಹಾಸದಿಂದ ತಿಳಿಯಬಹುದು. ಇವರ ಮೂಲವೃಂದಾವನವಿರುವ ಕ್ಷೇತ್ರವಾದ ವೇಣೀಸೋಮಪುರದಲ್ಲಿ ಈ ಪ್ರತಿಮೆಯ ಪ್ರತಿರೂಪವಾದ ಶಿಲಾಪ್ರತಿಮೆಯು ಇದ್ದು ಪ್ರತಿನಿತ್ಯ ಪೂಜೆಗೊಳ್ಳುತ್ತಲ್ಲಿದೆ.

ಛಂದಃ ಶಾಸ್ತ್ರದ ಹಿನ್ನೆಲೆಯಲ್ಲಿ ಈ ಮಂತ್ರ.

ಈ ಸ್ತುತಿಯು ಛಂದಃಶಾಸ್ತ್ರದ ಪ್ರಕಾರ ೨೧ ಅಕ್ಷರಗಳ ಜಾತಿಗೆ ಸಂಬಂಧಿಸಿದೆ. ಹಾಗು ಈ ಜಾತಿಯಲ್ಲಿ ಸ್ರಗ್ಧರಾವೃತ್ತದಿಂದ ಕೂಡಿರುವಂಥಾದ್ದಾಗಿದೆ.

ಸ್ರಗ್ಧರಾವೃತ್ತದ ಲಕ್ಷಣವು ಇಂತಿದೆ

ಮ್ರಭ್ನೈರ್ಯಾಣಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಽಯಮ್ ಎಂದು. ವಿವರ : ಈ ಸ್ರಗ್ಧರಾವೃತ್ತದಲ್ಲಿ ಮಗಣ ರಗಣ ಭಗಣ ನಗಣ ಹಾಗು ಮೂರು ಯಗಣಗಳು ಇರಬೇಕು. ತ್ರಿಮುನಿಯತಿಯುತಾ ಎಂದು ಇಲ್ಲಿ ಹೇಳಿದ್ದಾರೆ. ಅಂದರೆ ಮುನಿ=ಸಪ್ತಋಷಿಗಳು, ಯತಿ=ಅರ್ಧವಿರಾಮ. ಇದರಿಂದ ಏಳು ಏಳು ಅಕ್ಷರಗಳಿಗೆ ಅರ್ಧವಿರಾಮವನ್ನು ಕೊಡಬೇಕು ಎಂದು ಅರ್ಥ. ಈ ರೀತಿ ಮೂರು ಬಾರಿ ಅರ್ಧವಿರಾಮ (ಯತಿ) ಇರುವುದನ್ನು ಗುರ್ತು ಮಾಡಿ ತೋರಿಸಲಾಗಿದೆ. ಈ ಎಲ್ಲ ಲಕ್ಷಣಗಳು ಶ್ರೀನೃಸಿಂಹಾಷ್ಟಕದ ಪ್ರತಿಸಾಲಿನಲ್ಲಿಯೂ ಗೋಚರಿಸುತ್ತವೆ. ಒಂದೇ ಒಂದು ಹೃಸ್ವ ದೀರ್ಘವೂ ಸಹ ವ್ಯತ್ಯಾಸವಾಗಿ ಇರುವುದಿಲ್ಲ.

ಇಲ್ಲಿನ ವೈಶಿಷ್ಟ್ಯವೇನೆಂದರೆ, ಈ ಸ್ತೋತ್ರವು ಇಂತಹ ಲಕ್ಷಣಗಳಿಂದ ಕೂಡಿರಬೇಕೆಂದು ಹೇಳಿರುವ ಮ್ರಭ್ನೈರ್ಯಾಣಾಂ ಎನ್ನುವ ಸಾಲೂ ಸಹ ಈ ಲಕ್ಷಣಗಳಿಂದ ಕೂಡಿದೆ. ವಿವರಗಳನ್ನು ತಿಳಿಸಬೇಕೆಂಬ ಉದ್ದೇಶದಿಂದ ಒಟ್ಟಾರೆ ಯಾವುದೋ ಒಂದು ಸಾಲಿನಿಂದ ಹೇಳಬಹುದಿತ್ತು. ಹಾಗೆ ಮಾಡದೆ ಸ್ರಗ್ಧರಾವೃತ್ತದಿಂದಲೇ ಲಕ್ಷಣಶ್ಲೋಕವನ್ನೂ ಹೇಳಿದ್ದಾರೆ. ಇದೇ ಸಂಸ್ಕೃತಸಾಹಿತ್ಯದ ವೈಶಿಷ್ಟ್ಯ.

ಶ್ರೀರಾಯರು ರಚಿಸಿರುವ ಶ್ರೀರಾಮಚಾರಿತ್ರ್ಯಮಂಜರೀ ಮೊದಲಾದ ಸ್ತೋತ್ರಗಳು ಸಹ ಈ ಸ್ರಗ್ಧರಾವೃತ್ತದಲ್ಲಿಯೇ ಇವೆ. **

——————————————————————–

* ಗುರುಚರಿತೆ ಗ್ರಂಥವು ಕೃಷ್ಣಾ ನದೀ ಎಂದು ಹೇಳುತ್ತದೆ.
** ಸ್ತೋತ್ರದ ಛಂದಃಶಾಸ್ತ್ರದ ಮಾಹಿತಿಯನ್ನು ಕೊಟ್ಟಿದ್ದು ನನ್ನ ಗುರುಗಳಾದ ಶ್ರೀ. ಪಡುಬಿದ್ರಿ ಹರಿನಾಥರು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

2 Comments

  1. See bharathi
    April 25, 2018
    Reply

    Very good information thank you very much

  2. Mahesh
    May 17, 2019
    Reply

    Grabbed much informed thanks

Leave a Reply

This site uses Akismet to reduce spam. Learn how your comment data is processed.