ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ತುಂಗನಾಥನ ಆಸುಪಾಸಿನಲ್ಲಿ ಇದ್ದೆ. ಅತಿ ಅನ್ನುವಷ್ಟು ಉದ್ದವಾದ ಅನುಭವವನ್ನು ಬರೆದದ್ದೂ ಆಯ್ತು. ಆದರೆ ಕೊನೆಯ ಕಂತನ್ನು ಬರೆದಿಟ್ಟೇ 6 ತಿಂಗಳುಗಳು ಕಳೆದಿವೆ. ಪೋಸ್ಟ್ ಮಾಡಲು ವಿಪರೀತ ಸೋಮಾರಿತನವನ್ನು ಮಾಡಿದೆ. ಈ ಮಧ್ಯದಲ್ಲಿ ಅದೆಷ್ಟು ಕೋಟಿ ಗ್ಯಾಲನ್ನುಗಟ್ಟಲೆ ನೀರು ಮಂದಾಕಿನಿ ಅಲಕನಂದೆಯರಲ್ಲಿ ಹರಿದು ಹೋಗಿದೆಯೋ ಎಂದು ಆ ನೀರನ್ನು ಸಂಗ್ರಹಿಸಿಟ್ಟುಕೊಂಡಿರುವ ಅಲಕನಂದೆಯ ಗಂಡನಾದ ವರುಣನೇ ಬಲ್ಲ . ಅಂತೂ ಇವತ್ತಿಗೆ ಸಮಯ ಬಂದಿತು.
ಹಿಂದಿನ ಕಂತುಗಳು ಭಾಗ 1 | ಭಾಗ 2 | ಭಾಗ 3
ಆನಂದದತ್ತ ಮುನ್ನಡೆ
ಜಗದೀಸನು ನನ್ನ ಮುಖದಲ್ಲಿ ಮಿನುಗಿ ಕ್ಷಣಾರ್ಧದಲ್ಲಿ ಮಾಯವಾದ ಆನಂದವನ್ನು ನೋಡಿ ಹೇಳಿದ. “ಸಿತಂಬರ್ ಮೆ ಅಯ್ಯೇಗಾ ತೋ ಖೂಬ್ ಬರಫ್ ಔರ್ ಚೌಖಂಬಾ ದೋನೋ ಮಿಲೇಗಾ”. ಹೂಂಗುಟ್ಟುತ್ತಾ ಮುನ್ನಡೆದೆ. ದೇವಸ್ಥಾನದ ಶಿಖರ ಕಾಣಿಸಿತು. ಮುನ್ನಡೆಯುತ್ತಿದ್ದಂತೆ ಅಲ್ಲಿಯೇ ಒಂದು ತಿರುವಿನಲ್ಲಿ ಒಬ್ಬ ಪಾಂಡಾ ಮಹಾಶಯನು ನನ್ನನ್ನು ನೋಡಿದ. ಅವನಿಗೆ ಕುರಿಯೇ ಸಿಕ್ಕಿತೆಂದು ಭಾವನೆ ಮೂಡಿತೆನಿಸುತ್ತದೆ. ಕುರಿಯನ್ನು ಕೇಳದೆಯೇ ಮಸಾಲೆಯನ್ನು ಅರೆಯಲು ಅಲ್ಲಿಯೇ ಇದ್ದ ಒಬ್ಬ ಅಂಗಡಿಯವನಿಗೆ ಹೇಳಿದ.
ಮದರಾಸಿ ಎಂದು ಕರೆದುಬಿಟ್ಟರೆ ಕಷ್ಟ ಎಂದು ಕುರಿಯೇ “ನಾನು ಬೆಂಗಳೂರಿನವನು” ಎಂದು ಹೇಳಿತು. “ಅಚ್ಛಾ, ತೋ ಆಪ್ ಬೆಂಗಲೌರ್ ಸೆ ಹೈ” ಎನ್ನುತ್ತಾ ಪೂಜಾಸಾಮಾಗ್ರಿಗಳನ್ನು ಹಿಡಿದುಕೊಂಡು ಹಿಂಬಾಲಿಸಲು ಅಪ್ಪಣೆ ಮಾಡಿ ಹೊರಟ. ಬ್ಯಾ ಬ್ಯಾ ಎನ್ನಲೂ ಆಗದೆ ಕುರಿಯು ಹಿಂಬಾಲಿಸಿತು. ಒಂದು ರೀತಿ ಲಾಭವೇ ಆಯಿತು. ಆ ಪುರೋಹಿತನು “ಇದು ಬದರಿಗೆ ಹೋಗುವ ಒಳದಾರಿ” ಎಂದು ಒಂದು ಕಾಲ್ದಾರಿಯನ್ನು ತೋರಿಸಿದ.ಅಲ್ಲಿಂದ ಒಂದು ೧೦-೧೫ ಮೆಟ್ಟಿಲುಗಳನ್ನೇರಿದರೆ ತುಂಗನಾಥನ ಮಂದಿರವನ್ನು ತಲುಪುತ್ತೇವೆ.
ಈ ಬೆಟ್ಟದ ಮೇಲೆ 12073 ಅಡಿಗಳ ಎತ್ತರದ ಭಾಗದಲ್ಲಿ ಇದ್ದುದರಲ್ಲಿಯೇ ಒಂದು ಸಮತಟ್ಟಾದ ನೆಲದ ಮೇಲೆ ತುಂಗನಾಥನ ಮಂದಿರವನ್ನು ನಿರ್ಮಿಸಲಾಗಿದೆ. ಮಂದಿರವೆಂದರೆ ಬದರಿನಾಥದಷ್ಟು ದೊಡ್ಡದೇನಲ್ಲ. ಪುಟ್ಟ ದೇಗುಲ ಇದು. ಗಾಂಧಾರ ಶೈಲಿಯ ಸರಳಗೋಪುರ, ಅದರ ಕೆಳಗೆ ಅದಕ್ಕಿಂತಲೂ ಸರಳವಾಗಿ ಜೋಡಿಸಿದ ಹಾಸುಗಲ್ಲುಗಳ ಒಂದು ಕೋಣೆಯೇ ಮಂದಿರ. ಇಷ್ಟೆ ಈ ಮುದ್ದಾದ ಗುಡಿಯ ಕಟ್ಟಡ. ಗರ್ಭಗುಡಿಗೂ ಅದರ ಮುಂದಿರುವ ಮಂಟಪಕ್ಕೂ ಹೆಚ್ಚಿನ ಅಂತರವೇನಿಲ್ಲ. ಮಧ್ಯ, ಮೇಲ್ಭಾಗದಲ್ಲಿ ತೊಲೆಯಂತಹ ಒಂದು ಶಿಲೆ ಇದೆ. ಅದರ ಹಿಂಭಾಗ ಗರ್ಭಗುಡಿ, ಮುಂಭಾಗವೇ ಮಂಟಪ. ಇವಿಷ್ಟೇ ತುಂಗನಾಥನ ಸ್ಥಿರಾಸ್ತಿ. “ನಿಮ್ಮ ಆಸ್ತಿಯನ್ನು ತೆಗೆದುಕೊಂಡು ನಾನೇನು ಮಾಡಲಿ, ನನ್ನ ಹಿಂದೆ ಮುಂದೆಲ್ಲ ಜಗನ್ನಾಥನೇ ಕೊಟ್ಟಿರುವ ಅಮಲವಾದ ಹಿಮಾಲಯವೇ ಇರುವಾಗ” ಎನ್ನುತ್ತಿದ್ದಾನೆ ತುಂಗನಾಥ. ಅದ್ಭುತವಾದ ಪ್ರಕೃತಿಯದು. ಎತ್ತರದಿಂದ ನೋಡಿದಾಗ ಹಿಮಾಲಯವು ಚೆನ್ನಾಗಿ ಕಾಣುತ್ತದೆ ಎಂದು ಎಲ್ಲರಿಗಿಂತ ಎತ್ತರದಲ್ಲಿ ತಾನೇ ಕುಳಿತುಕೊಂಡಿದ್ದಾನೆ. ಹೌದು. ಇದು ಜಗತ್ತಿನ ಅತಿ ಎತ್ತರದಲ್ಲಿರುವ ಶಿವಾಲಯ.
ಸ್ಥಳೀಯ ಚರಿತ್ರೆ.
ಹೆಚ್ಚಿನೆಡೆಗಳಲ್ಲಿ ಹೇಳುವಂತೆ ಇಲ್ಲಿಯೂ ಮಹಾಭಾರತಕ್ಕೆ ತಾಗಿರುವಂತಹ ಒಂದು ಕಥೆಯನ್ನು ಹೇಳುವರು. ಆದರೆ ಪ್ರಾಜ್ಞರಿಗೆ ಈ ಕಥೆಯು ರುಚಿಸದು. ಇದು ಮಹಾಭಾರತದ ಪ್ರಕ್ಷಿಪ್ತವೇ ಆಗಿರಬೇಕೆಂದು ನನ್ನ ಭಾವನೆ.
ಪಾಂಡವರು ಸ್ವಬಾಂಧವರ ಹತ್ಯೆಯನ್ನು ಮಾಡಿ ರಾಜ್ಯವನ್ನೇನೋ ಪಡೆದುಕೊಂಡರು. ಆದರೆ ಅದರೊಂದಿಗೆ ಪಾಪವು ಕೂಡ ಸಂಚಯವಾಯಿತು. “ಆ ಪಾಪದ ನಿವಾರಣೆಗಾಗಿ ರುದ್ರನ ಮೊರೆ ಹೋಗಿರಿ” ಎಂದು ಕುಲದ ಹಿರಿಯರಾದ ಭಗವಾನ್ ವೇದವ್ಯಾಸರು ಹೇಳಿದರು. ಅದರಂತೆ ಅವರಲ್ಲೆರೂ ರುದ್ರನನ್ನು ಪ್ರಾರ್ಥಿಸಲು ಕೈಲಾಸಕ್ಕೆ ಬಂದರು. ಆದರೆ ರುದ್ರದೇವರಿಗೆ ಈ ಪಾಪಭರಿತರ ಸಹವಾಸ ಬೇಕಿದ್ದಿಲ್ಲ. ಹಾಗಾಗಿ ಎತ್ತಿನ ರೂಪವನ್ನು ಧರಿಸಿ ಗುಪ್ತವಾಗಿ ಬೇರೆ ಸ್ಥಳದಲ್ಲಿ ಅಡಗಿಕೊಂಡರು (ಗುಪ್ತಕಾಶಿ ಎಂದು ಈಗ ಅದನ್ನು ಕರೆಯುತ್ತಾರೆ). ಆದರೂ ಪಾಂಡವರು ರುದ್ರದೇವರನ್ನು ಬಿಡದೆ ಬೆಂಬತ್ತಿದರು. ಕೊನೆಗೆ ಎತ್ತಿನ ರೂಪದಲ್ಲಿಯೇ ಅವರನ್ನು ಹಿಡಿದುಕೊಂಡರೆ ಅವರು ತಮ್ಮ ಅಂಗಾಗಗಳನ್ನೇ ಕಳಚಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪ್ರಕಟಗೊಂಡರು. (ಕೆಲವರು ಎಮ್ಮೆಯ ರೂಪದಲ್ಲಿ ಎಂದೂ ಹೇಳುವುದುಂಟು) ಆ ಐದು ಸ್ಥಳಗಳೇ ಪಂಚ ಕೇದಾರಗಳು. ಈ ಐದೂ ಸ್ಥಳಗಳಲ್ಲಿ ಪಾಂಡವರು ರುದ್ರದೇವರಿಗಾಗಿ ಮಂದಿರವನ್ನು ನಿರ್ಮಿಸಿದರು ಎಂದು ಈ ಮಹಾತ್ಮ್ಯೆಯು ಹೇಳುತ್ತದೆ. ಹೀಗೆ ಬಾಹುಗಳು ಪ್ರಕಟವಾದ ಜಾಗವೇ ತುಂಗನಾಥ.
ಮಂದಿರಗಳನ್ನು ಪಾಂಡವರೇ ನಿರ್ಮಿಸಿರಬಹುದು, ಅವರು ರುದ್ರದೇವರನ್ನು ಕುರಿತು ತಪಸ್ಸನ್ನು ಮಾಡಿರಲೂ ಬಹುದು. ಹೋಗಿ ರುದ್ರದೇವರನ್ನು ಒಲಿಸಿ ಪಾಶುಪತವನ್ನು ಪಡೆ ಎಂದು ಅರ್ಜುನನಿಗೆ ಶ್ರೀಕೃಷ್ಣನೇ ಹೇಳಿರುವುದು ಇದೆ. ಆದರೆ ಭೀಮಸೇನದೇವರು ರುದ್ರದೇವರನ್ನು ಕುರಿತು ತಪಸ್ಸು ಮಾಡಿರುವುದರ ಬಗ್ಗೆ ಮಹಾಭಾರತದ ಶುದ್ಧಪಾಠ ಏನು ಹೇಳುತ್ತದೋ ನೋಡಬೇಕು. ಇತರ ಪಾಂಡವರೂ ತಪಸ್ಸು ಮಾಡಿದ್ದಾರೆ ಎಂದೇ ಭಾವಿಸೋಣ. ಆದರೆ ಪಾಪಲೇಪವಾಯಿತು ಎನ್ನುವ ಅಭಿಪ್ರಾಯ ವೇದವ್ಯಾಸರಿಗೆ ಅಸಮ್ಮತವೇ ಆಗುತ್ತದೆ. ಯಾಕೆಂದರೆ “ಯುದ್ಧವನ್ನು ರಾಜ್ಯದಾಹದಿಂದ ಮಾಡದೆ, ಕೇವಲ ಅಧರ್ಮವನ್ನು ಶಿಕ್ಷಿಸಬೇಕೆಂಬ ನಿನ್ನ ಕರ್ತವ್ಯರೂಪದಿಂದ ಮಾಡು, ಲಾಭಾಲಾಭ ಜಯಾಜಯಗಳ ಚಿಂತೆಯನ್ನು ನನಗೆ ಬಿಡು. ನೀನು ಯುದ್ಧ ಮಾಡುತ್ತಿರುವವನು ಎಂದರೆ ಅದು ನಿನ್ನ ಅಜ್ಞಾನ. ವಾಸ್ತವವಾಗಿ ನಾನು ನಿನ್ನೊಳಗೆ ಇದ್ದು ಯುದ್ಧ ಮಾಡಿಸುತ್ತಿದ್ದೇನೆ” ಎಂದು ಹೃದಯಕ್ಕೆ ಮುಟ್ಟುವಂತೆ ತಿಳಿಹೇಳಿ, ಕೃಷ್ಣನೇ ಅಲ್ಲವೇ ಯುದ್ಧ ಮಾಡಿಸಿದ್ದು? “ಕರ್ತ್ಯವ್ಯಪ್ರಜ್ಞೆಯಿಂದ ಮಾಡಿದಾಗ ಪಾಪದ ಲೇಪವೆಲ್ಲಿಯದು” ಎಂದು ಕೂಡ ಅವನೇ ಹೇಳಿರುವಾಗ ಪಾಂಡವರಿಗೆ ಪಾಪವು ಬರಲಿಲ್ಲ ಎಂದೇ ಆಗುತ್ತದೆ. ಇತರರು ತಪಸ್ಸು ಮಾಡಿದರೇನೋ ಆದರೆ ಭೀಮಸೇನರಾಯರು ಈ ಉದ್ದೇಶದಿಂದ ಖಂಡಿತಾ ತಪಸ್ಸು ಮಾಡಲಾರರು. ಅವರಿಗೆ ಪಾಪದ ಲೇಪವು ಸರ್ವಾಥಾ ಆಗದು. ಈ ಒಂದು ಅಂಶವು ಈ ಸ್ಥಳ ಮಹಾತ್ಮ್ಯೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟಿದೆ ಅಷ್ಟೆ. ಆದರೆ ಸ್ಥಳೀಯರಿಗೆ ಈ ವಾದವು ಹೇಗೆ ರುಚಿಸೀತು? ವಾದಿಸಿದರೆ ನಾವು ಏಟು ತಿನ್ನಬೇಕಾದೀತು. ನಾವು ಕುರಿಗಳಾಗುವುದಂತೂ ಸರಿಯೇ, ಆದರೆ ಏಟನ್ನೂ ತಿಂದು ಬಾಲವನ್ನೂ ತಿರುಚಿಸಿಕೊಳ್ಳುತ್ತಾಇಲ್ಲಿಯೇ ಜನರನ್ನು ಹತ್ತಿಸಿಕೊಂಡು ಓಡಾಡುವ ಕತ್ತೆಗಳೂ ಆಗಬಾರದು ಎನ್ನುವ ಕಳಕಳಿಯಿಂದಲೇ ಆಚಾರ್ಯರು ಕೇದಾರದ ದರ್ಶನವನ್ನು ನಿಷೇಧಿಸಿದರೆನಿಸುತ್ತದೆ. ಕಮ್ಯುನಿಸ್ಟರೂ, ರ‍್ಯಾಶನಲಿಸ್ಟುಗಳೂ ಹೆಚ್ಚಾಗಿರುವ ಕೇರಳ, ಆಂಧ್ರ ಹಾಗು ಬಂಗಾಲದ ಕೆಲಭಾಗದ ಭೇಟಿಯನ್ನು ನಿಷೇಧಿಸಿರುವುದೂ ಕೂಡ ಇದೇ ಅಭಿಪ್ರಾಯದಲ್ಲಿ ಇರಬೇಕು.
“ಹಾಗಿದ್ದರೆ ನೀನ್ಯಾಕೆ ಈ ಊರಿಗೆ ಹೋದೆ” ಎಂದು ನೀವು ಕೇಳಬಹುದು. ನನ್ನ ಸಮಾಧಾನವಿಷ್ಟು. ಆಚಾರ್ಯರು ಕೇದಾರದ ದರ್ಶನಕ್ಕೆ ಮಾತ್ರ ನಿಯಂತ್ರಣವನ್ನು ಹೇರಿದ್ದಾರೆ, ತುಂಗನಾಥಕ್ಕೆ ಅಲ್ಲವಲ್ಲ ಎನ್ನುವ ಅಭಿಪ್ರಾಯದಲ್ಲಿ ನಾನು ಹೋಗಿಬಂದೆ. ಒಂದು ವೇಳೆ ಇದೂ ಕೂಡ ತಪ್ಪಾದಲ್ಲಿ ಮಹಾದೇವರೇ ನನ್ನ ಮನಸ್ಸನ್ನು ಶುದ್ಧಿಮಾಡಲಿ ಎಂದು ನೈಜವಾದ ಪ್ರಾರ್ಥನೆಯನ್ನು ಮಾಡುತ್ತೇನೆ.
ಶುದ್ಧಿ ಎನ್ನುವ ಮಾತು ಬಂದಾಗ ಈ ಸ್ವಾರಸ್ಯವು ನೆನಪಾಯಿತು. ತುಂಗನಾಥದ ಸುತ್ತಮುತ್ತಲಿರುವ ಪರಿಸರವು ಸ್ಪಟಿಕಸದೃಶವಾದ ಶುದ್ಧತೆಯನ್ನು ಹೊಂದಿದೆ. ಮಾನವಸ್ಪರ್ಷಕ್ಕೆ ಹೊರತಾದ ಪರಿಶುದ್ಧತೆಯು ಸದಾ ಇಲ್ಲಿ ನೆಲೆಮಾಡಿರುತ್ತದೆ. ಸನ್ನಿಧಿಯ ಸುತ್ತಮುತ್ತ ಸದಾಕಾಲ ಮೋಡಗಳ ಆಟ ನಡೆದೇ ಇರುತ್ತದೆ. ನಾನು ಹೋದಾಗ ಗುಡಿಯ ಹೊರಗೆ ಸುಮಾರು ೨೫-೩೦ ತಾಮ್ರದ ತಂಬಿಗೆಗಳನ್ನು ಇಟ್ಟಿದ್ದರು. ಆ ಎಲ್ಲ ತಂಬಿಗೆಗಳೂ ನೀರಿನಿಂದ ತುಂಬಿದ್ದವು. ಯಾರೋ ಹಿಡಿದಿಟ್ಟ ನೀರಲ್ಲ ಅದು. ಮೋಡಗಳ ಕಣಗಳಿಂದ ತಾವಾಗಿಯೇ ಬಸಿದು ತುಂಬಿರುವಂತಹವು!. ನೋಡಲು ಮಜವಾಗಿ ಕಂಡಿತು. ಅದರ ಹಿಂದೆಯೇ ನಮ್ಮ ಅಕ್ಕ ಮತ್ತು ಭಾವ ಬಂದಿದ್ದರೆ! ಎಂದೆನಿಸಿತು. ಇದಕ್ಕಿಂತಲೂ ಮಡಿಯ ನೀರು ಎಲ್ಲಿ ಸಿಕ್ಕೀತು ಅವರಿಗೆ? ನೀರಿಗೆ ಇರಲಿ, ಅವರಿಗೂ ಮೈಲಿಗೆ ಆಗುವ ಭಯವೇ ಇಲ್ಲ ಇಲ್ಲಿ. ಯಾರಾದರೂ ಎಷ್ಟು ಬಾರಿ ಮುಟ್ಟಿದರೂ ಮರುಕ್ಷಣದಲ್ಲಿಯೇ ಮೋಡಗಳ ಮಧುಪರ್ಕ ರೆಡಿಯೇ ಇರುತ್ತವೆ ಅವರನ್ನು ಮೀಯಿಸಲು! ಭಾವನ ಜಪಯಜ್ಞಕ್ಕೂ ಇದು ಅತ್ಯಂತ ಶ್ರೇಯಸ್ಕರವಾದ ಸ್ಥಳ. ಅಕ್ಕನಿಗಂತೂ ಪಾತ್ರೆ ತೊಳೆಯಲು ಯಥೇಚ್ಛವಾಗಿ ನೀರು, ಗ್ವಾಮಾ ಹಚ್ಚಲಿಕ್ಕೆ “ಯಥಾ+ಉಚಿತ” ಷಗಣಿಯೂ ಸಿಗುವುದು. ಯಾರೋ ಮುಟ್ಟಿದರು ಎನ್ನುವ ಸಂಶಯಕ್ಕೆ ಆಸ್ಪದವೇ ಇಲ್ಲ. “ಅಯ್ಯೋ ಇಲ್ಲಿ ಮನೆ ಮಾಡುವುದನ್ನು ಬಿಟ್ಟು ಚಾಮರಾಜಪೇಟೆಯಲ್ಲಿ ಮಾಡಿದ್ದಾರಲ್ಲ” ಎಂದು ಕ್ಷಣಕಾಲ ಮರುಗಿದೆ.
ಸನ್ನಿಧಾನ ವಿಶೇಷ
ದೇವರ ಸನ್ನಿಧಿಯಲ್ಲಿ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೆಯೇ ಹೇಳಲಾಗದ ಒಂದು ದೈವಿಕ ಅನುಭವವಾಯಿತು. ಕೇವಲ ವೈಬ್ರೇಶನ್ ಎಂದು ಹೇಳಿ ಅದಕ್ಕೆ ಅಪಚಾರ ಮಾಡಲಾರೆ. ಸಹಸ್ರಾರು ವರ್ಷಗಳ ದೈವೀ ಮಹತ್ವ ಅಲ್ಲಿ ಕೆನೆಗಟ್ಟಿದೆ ಎಂದು ಹೇಳಿದರೂ ಕಡಿಮೆಯೇ ಆದೀತು. ಸನ್ನಿಧಾನದ ಪ್ರಾಚೀನ ಶಕ್ತಿ ನನಗಂತೂ ಅನುಭವಕ್ಕೆ ಬಂತು. ಬಹಳ ಮಂಜುಲವಾದ ಪ್ರಕೃತಿಯಿಂದ ಕೂಡಿರುವ ಸನ್ನಿಧಾನವದು. ದೇಗುಲದ ಒಳಗೆ ನೀರು ಒಸರಿ ಒಸರಿ ನೆಲವೆಲ್ಲ ಒದ್ದೆಯಾಗಿತ್ತು. ಶಿವಲಿಂಗವು ವೈಪರೀತ್ಯದಿಂದ ಕೂಡಿರುವ ಹವಾಮಾನದ ಮಧ್ಯ ಇರುವುದರಿಂದಲೋ ಏನೋ ಒರಟಾಗಿ ಇರುವುದು. ಆದರೆ ಶಿಥಿಲವೇನಲ್ಲ. ಇಲ್ಲಿಆಗಮ ರೀತಿಯ ಪೂಜೆ ನಡೆಯುವುದು. ಸನ್ನಿಧಿಯ ಮಹಿಮೆಯು ಸ್ಪಷ್ಟವಾಗಿ ಗೋಚರವಾಗುವಂತೆ ಇದೆ. ನನಗಂತೂ ಹೇಳಲಾಗದಂತಹ ಸಂತೋಷವಾಯಿತು. ಅಷ್ಟೆತ್ತರಕ್ಕೆ ನಡೆದುಕೊಂಡು ಬಂದ ಶ್ರಮವೆಲ್ಲ ಪರಿಹಾರವಾಗುವಂತೆ ಇದೆ ಈ ಸನ್ನಿಧಿ. ಪಾಂಡಾ ಮಹಾರಾಜರನ್ನು ನೋಡಿ ಲಘುವಾಗಿ ಹೋಗಿದ್ದ ದೇಹವು ಮತ್ತೆ ರಘುವಾಗಿದ್ದು ಈ ಅಘೋರನ ದರ್ಶನವಾದಾಗಲೇ. ಅಪ್ಪ ಅಮ್ಮನ ಸಂಸ್ಕಾರಬಲದಿಂದಲೋ ಏನೋ ಆಚಾರ್ಯರು ಹೇಳಿಕೊಟ್ಟಿರುವ “ಧ್ಯೇಯಃ ಪಂಚಮುಖೋರುದ್ರೋ ಶುದ್ಧಸ್ಪಟಿಕಾಮಲಕಾಂತಿಮಾನ್….” ಶ್ಲೋಕವು ತಾನೇ ತಾನಾಗಿ ಹೃದಯದಲ್ಲಿ ಮೂಡಿತು. ಪುಣ್ಯಕ್ಕೆ ಆ ಸ್ಥಳೀಯ ಪಾಂಡಾ ಹಾಗು ದೇವಸ್ಥಾನದ ಅರ್ಚಕರು ಏನೂ ಕಿರಿಕಿರಿ ಮಾಡದೆ ಸಂತಸದಿಂದಲೇ ಮನಸ್ಸಿಗೆ ಬಂದಷ್ಟು ಹೊತ್ತು ಧ್ಯಾನಮಾಡಲು ಅನುವು ಮಾಡಿಕೊಟ್ಟರು. ನಂತರ ಅವರ ಸಮಾಧಾನಕ್ಕೊಂದಿಷ್ಟು ಪೂಜೆಯನ್ನೂ ಕೂಡ ಸಲ್ಲಿಸಿದ್ದಾಯಿತು.
ಶಿವಲಿಂಗದ ಹಿಂದೆ ಆದಿಶಂಕರರ ಚಪ್ಪಟೆಗಲ್ಲಿನ ಮೂರ್ತಿ, ಶಿವಪಂಚಾಯತನದ ಒಂದು ಪ್ರತಿಮೆಯು ಇರುವುವು. ಚಿಕ್ಕಪುಟ್ಟ ದೇವರುಗಳದ್ದೂ ಕೆಲವು ಮೂರ್ತಿಗಳನ್ನು ತೋರಿಸಿದರು ಪೂಜಾರರು. ಆದರೆ ನನ್ನ ಮನಸ್ಸು ಅಲ್ಲಿಯೇ ಇದ್ದ ಫಳಫಳ ಹೊಳೆಯುತ್ತಿದ್ದ ತಾಮ್ರದ ಪ್ರತಿಮೆಯೊಂದರ ಮೇಲೆ ನೆಟ್ಟಿತ್ತು. “ಯೇ ಭಗ್ವಾನ್ ಬೇದ್ಬ್ಯಾಸ್ ಜೀ ಹೈ” ಎಂದು ಪರಿಚಯಿಸಿದರು. ಚಿತ್ತಾಕರ್ಷಕವಾದ ಇದನ್ನು ಇವರು ವೇದವ್ಯಾಸದೇವರದ್ದೆಂದು ಹೇಳುತ್ತಾರೆ. ಅನುಸಂಧಾನ ಹಾಗೆ ಇದ್ದಲ್ಲಿ ಖಂಡಿತವಾಗಿಯೂ ಅದು ವೇದವ್ಯಾಸರೇ ಆಗಬಹುದು. ತೊಂದರೆಯೇನಿಲ್ಲ. ಆದರೆ ಪ್ರತಿಮೆಯ ರಚನೆಯನ್ನು ನೋಡಿದಾಗ ಮತ್ತೊಂದು ಜಿಜ್ಞಾಸೆ ಉಂಟಾಯಿತು. ಶುದ್ಧ ಗಾಂಧಾರಶೈಲಿಯ, ಧ್ಯಾನಮುದ್ರೆಯಲ್ಲಿ ಕುಳಿತಿರುವ, ಗುಂಗುರುಗೂದಲಿನ, ಯುವಾವಸ್ಥೆಯಲ್ಲಿರುವ ಯೋಗಿಯೊಬ್ಬನ ಪ್ರತಿಮೆಯದು. ಪ್ರತಿಮೆಯ ಹಿಂದೆ ಸುಂದರವಾದ ಪ್ರಭಾವಳಿಯೂ ಇದ್ದ ನೆನಪು ಇದೆ. ನೂರಾರು ವರ್ಷಗಳ ಹಿಂದೆ ಇಲ್ಲೆಲ್ಲ ಬೌದ್ಧರ ಪ್ರಭಾವ ಇತ್ತು ಎನ್ನುವ ಹಿನ್ನೆಲೆಯಲ್ಲಿ ಬೌದ್ಧಯೋಗಿ ಎಂತ ಊಹಿಸಿದೆ. ಆದರೆ ಪ್ರಾಮಾಣಿಕವಾಗಿಯೇ ಹೇಳಬೇಕೆಂದರೆ ಇದು ಜೈನರ ಮಹಾವೀರನ ಪ್ರತಿಮೆಯಂತೆ ಕಾಣುತ್ತದೆ.
ನಮಗೆ ಮಧ್ವವಿಜಯವು ವಿವರಿಸುವ ಪ್ರಕಾರ ವೇದವ್ಯಾಸರು ಅಪ್ರತಿಮ ಸೌಂದರ್ಯವುಳ್ಳವರೇ. ಆದರೆ ಜಟಾಧಾರಿಯಾಗಿಯೂ, ಗಡ್ಡವನ್ನು ಬಿಟ್ಟವರೂ, ಯೋಗಪಟ್ಟಿಕೆಯನ್ನು ಕಟ್ಟಿಕೊಂಡವರೂ ಆದ ಸ್ವರೂಪದಲ್ಲಿ ಕಾಣಿಸುವವರು. ಮಹಾಭಾರತದ ಪ್ರಕಾರ ಧೃತರಾಷ್ಟ್ರ ಹುಟ್ಟಿದಾಗ ವ್ಯಾಸರ ವಯಸ್ಸು ೬೬೦ವರ್ಷಗಳು!. (ವ್ಯಾಸಃ ಷಟ್ಶತವರ್ಶೀಯಃ ಧೃತರಾಷ್ಟ್ರಮಜೀಜನತ್) ಇಷ್ಟಾದರೂ ಇವರು ಮುದುಕರಲ್ಲ, ನಿಜ. ಆದರೆ ಯುವಕನಂತೆ ಅಂತೂ ಇವರ ಚಿತ್ರಣವಿಲ್ಲ. ಹಾಗೆಂದು ಹೇಳಿ ಈ ಚಿತ್ರಣಕ್ಕಿಂತಲೂ ವಿಭಿನ್ನವಾದ ಸ್ವರೂಪದಲ್ಲಿ ಅವರನ್ನು ನಾವು ಕಾಣುವುದು ಅಸಾಧ್ಯ ಎಂದು ಹೇಳಲಾಗದು. ಚಿಕ್ಕ ಮಗುವಿನಂತೆಯೂ ವ್ಯಾಸದೇವನನ್ನು ಪೂಜಿಸಬಹುದು. ಆದರೆ ಶಾಸ್ತ್ರಗಳು ಹೇಳಿರುವುದಕ್ಕಿಂತ ಬೇರೆ ರೀತಿಯಲ್ಲಿ ಚಿಂತನೆ ಮಾಡುವಷ್ಟು ಭಕ್ತಿ ಹಾಗು ಜ್ಞಾನವಿದ್ದರೆ ಮಾತ್ರ ಅದು ಸಾಧ್ಯವೇನೋ. ಒಂದು ವೇಳೆ ಶಿಲ್ಪಕಾರನು ಈ ಒಂದು ಅನುಸಂಧಾನದಲ್ಲಿಯೇ ಹೀಗೆ ವಿಭಿನ್ನವಾದರೀತಿಯಲ್ಲಿ ವೇದವ್ಯಾಸದೇವರ ಪ್ರತಿಮೆಯನ್ನು ನಿರ್ಮಿಸಿರುವುದೇ ಆದಲ್ಲಿ ತುಂಗನಾಥದಲ್ಲಿ ಇರುವ ವ್ಯಾಸರ ಪ್ರತಿಮೆಯು ಅಪೂರ್ವವಾದುದು ಎನ್ನುವುದರಲ್ಲಿ ಸಂದೇಹವಿಲ್ಲ. ಆಕರ್ಷಕವಾದ ಆ ಪ್ರತಿಮೆಯ ಫೋಟೋ ತೆಗೆದುಕೊಳ್ಳಲು ಪರವಾನಗಿ ದೊರೆಯಲಿಲ್ಲ. ಈ ಒಂದು ದರ್ಶನದ ಕಾರಣರಾದ ಶ್ರೀಗುರುರಾಜರ ಅಂತರ್ಯಾಮಿಯಾದ ಶಿವಾಂತರ್ಯಾಮಿ ಮಧ್ವರ ಹೃದಯವಾಸಿಯಾದ ಶ್ರೀವೇದವ್ಯಾಸದೇವರನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಅಲ್ಲಿಂದ ಹೊರಬಂದೆ.
ಸೇವೆ ಇತ್ಯಾದಿ
ದೇವಾಲಯದಲ್ಲಿ ರುದ್ರಾಭಿಷೇಕ, ಪಂಚಾಮೃತ, ನೈವೇದ್ಯ ಇತ್ಯಾದಿ ಸೇವೆಗಳನ್ನು ನಡೆಸುತ್ತಾರೆ. ಪಕ್ಕದಲ್ಲಿಯೇ ಪಾಕಶಾಲೆಯಿದೆ. ಅದಕ್ಕೆ ಹೊಂದಿಕೊಂಡೇ ಊಟದ ಹಜಾರವೂ ಇದೆ. ಇಷ್ಟವಿದ್ದವರು ಪ್ರಸಾದವನ್ನು ಸ್ವೀಕಾರ ಮಾಡಿಬರಬಹುದು.
ಹಿಮಾಲಯದ ಎಲ್ಲ ದೇವಸ್ಥಾನಗಳು ಚಳಿಗಾಲದವರೆಗೆ ಮಾತ್ರ ತೆರೆದಿರುತ್ತವೆ. ಚಳಿಗಾಲದ ಪ್ರಾರಂಭದಲ್ಲಿ ಮೂಲವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಿ, ಅಖಂಡ ದೀಪದಸ್ಥಾಪನೆ ಮಾಡಿ ತೆರೆಯನ್ನುಎಳೆಯುತ್ತಾರೆ. ಇದಕ್ಕೆ ಪಟಬಂಧ್ ಎನ್ನುತ್ತಾರೆ. ಅಲ್ಲಿಂದ ಮುಂದೆ ಆರು ತಿಂಗಳುಗಳ ಕಾಲ ಹಿಮಬೀಳದ ಜಾಗದಲ್ಲಿ ದೇವರ ಉತ್ಸವವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಚೋಪಟಾದ ಸಮೀಪ ಇರುವ ಮಕ್ಕುಮಠ್ ಎನ್ನುವ ಊರಿನಲ್ಲಿ ನಮ್ಮ ಈ ತುಂಗರಾಯನ ಉತ್ಸವವಿಗ್ರಹವು ಚಳಿಗಾಲದ ಪೂಜೆಯನ್ನು ಸ್ವೀಕರಿಸುತ್ತವೆ.
ತುಂಗನಾಥ ಮಾತ್ರವಲ್ಲ, ಈ ಪ್ರಾಂತ್ಯದಲ್ಲಿರುವ ಎಲ್ಲ ಪ್ರಸಿದ್ಧ ದೇಗುಲಗಳ ಆಡಳಿತವು ಕೇದಾರನಾಥ-ಬದರೀನಾಥ ಸೇವಾ ಸಮಿತಿಗೆ ಒಳಪಟ್ಟಿದೆ. ಈ ದೇವಸ್ಥಾನದ ಬಳಿಯೇ ಒಂದು ಕಲ್ಲಿನ ಮಂಟಪದಲ್ಲಿ ಈ ಸಮಿತಿಯ ಪ್ರತಿನಿಧಿಯೊಬ್ಬರು ಕುಳಿತು ಅಧಿಕೃತವಾಗಿ ದಾನಗಳನ್ನು ಸ್ವೀಕರಿಸಿ ರಸೀದಿಯನ್ನು ಕೊಡುತ್ತಾರೆ. ಮನಸ್ಸಿಗೆ ತೋಚಿದಷ್ಟು ದೇಣಿಗೆಯನ್ನು ಕೊಡಬಹುದು. ಅನ್ನದಾನಕ್ಕಾಗಿ ದಾನ ಸಲ್ಲಿಸುವುದು ಹೆಚ್ಚಿನ ಜನರಿಗೆ ವಾಡಿಕೆ.
ಮುಖ್ಯ ಮಂದಿರದ ಹೊರಗೆ ಪಾರ್ವತೀದೇವಿಗೆ ಒಂದು ಆಲಯವುಂಟು. ಇದರ ಮುಂದೆ ಚಿಕ್ಕಚಿಕ್ಕ ಕಪಾಟುಗಳಂತಹ ಗುಡಿಗಳನ್ನು ನಿರ್ಮಿಸಿ ಕ್ಷೇತ್ರಪಾಲಕರು ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ತುಂಗನಾಥನ ಬಂಟನಾದ ಭೂತನಾಥನಿಗೊಂದು ಸ್ವಲ್ಪ ದೊಡ್ಡ ಗುಡಿಯುಂಟು. ಈ ಎಲ್ಲ ದೇವತೆಗಳಿಗೆ ಪೂಜೆಯಾದ ನಂತರ ಒಂದಿಷ್ಟು ಪ್ರಸಾದವನ್ನು ಅಲ್ಲಿಯೇ ಇರುವ ಹಿಮಾಲಯದ ಕಾಗೆಗಳಿಗೆ ಉಣಬಡಿಸುತ್ತಾರೆ. ಈ ಕಾಗೆಗಳ ಗಾತ್ರಮಾತ್ರ ಸ್ವಲ್ಪ ದಂಗುಬಡಿಸುವಷ್ಟು ದೊಡ್ಡದು. ಕೆಲವು ಕಾಗೆಗಳಂತೂ ಹಾರಾಡುತ್ತಿರುವ ಕಪ್ಪು ರಗ್ಬೀ ಚೆಂಡಿನಂತೆ ಕಂಡವು. ಪ್ರಸಾದವನ್ನು ತಿಂದು ತಿಂದು ಹಾಗಾಗಿದ್ದವೋ ಏನೋ ಗೊತ್ತಿಲ್ಲ. ಪ್ರಾಯಶಃ ಚಳಿಗಾಲದ ೬ ತಿಂಗಳು ಏನೂ ಸಿಗದೇ ಇದ್ದರೂ ಈಗ ತಿಂದ ಆಹಾರವನ್ನೇ ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ಕಡಿಮೆ ಆಹಾರದಲ್ಲಿ ಜೀವಿಸಲೆಂದು ಈ ವ್ಯವಸ್ಥೆ ಇದ್ದರೂ ಇರಬಹುದು. ಅಂತೂ ತುಂಗನಾಥನು ಇವುಗಳ ಯೋಗಕ್ಷೇಮವನ್ನೂ ವಹಿಸಿಕೊಂಡಿದ್ದಾನೆ. ಒಂದು ಚಿಕ್ಕ ಮಂಡಕ್ಕಿಚೀಲದ ಗಾತ್ರದ ಒಂದು ಕಾಗೆಯನ್ನು ಸಹ ನೋಡಿದೆ. ದಿಗಿಲುಗೊಂಡ ನನ್ನ ಮುಖವನ್ನು ನೋಡಿ ಪುರೋಹಿತರು “ಯೆ ಹೀ ಹೈ ಕಾಕ್ ಭುಸುಂಡೀ, ಕುಛ್ ಖಿಲಾಯಿಯೇ ಇಸೆ” ಎಂದರು. ಕಾಗೆಗೆ ತಿಂಡಿ ಹಾಕಲು ನಂದೇನೂ ಅಭ್ಯಂತರವಿರಲಿಲ್ಲ. ಆದರೆ ನೈಸರ್ಗಿಕವಾಗಿ ಜೀವಿಸುವ ಇವುಗಳಿಗೆ ಅನೈಸರ್ಗಿಕವಾದ ಬಿಸ್ಕೀಟು ಪಸ್ಕೀಟು ಹಾಕಲು ಮನಸ್ಸೊಪ್ಪಲಿಲ್ಲ. ಆದರೆ ಸುಮ್ಮನೆ ನಿಂತಿದ್ದರೆ ನನ್ನ ಟೋಪಿಯನ್ನೇ ಎಳೆದುಕೊಂಡು ಹೋದರೆ ಕಷ್ಟ ಎಂದು ಮುನ್ನಡೆದೆ.
ಪಾಂಡಾ ಕೇಳಿದ “ಎಲ್ಲಿ ಹೊರಟಿರಿ”?, “ಚಂದ್ರಶಿಲಾ ಪರ್ವತಕ್ಕೆ” ಎಂದೆ. ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.
ಚಂದ್ರಶಿಲಾ
ಚಂದ್ರಶಿಲಾ ಎನ್ನುವುದು ಈ ಪರ್ವತದ ತುತ್ತ ತುದಿ. ತುಂಗನಾಥನ ಮಂದಿರದಿಂದ ಅಂದಾಜು ಮತ್ತೊಂದು ಸಾವಿರ ಅಡಿ ಮೇಲೆ ಹತ್ತಿದರೆ ಈ ಸ್ಥಳವು ಸಿಗುತ್ತದೆ. ಅತ್ಯಂತ ದುರ್ಗಮವೇನಲ್ಲ. ರುದ್ರಮನೋಹರವಾಗಿದೆ.. ಕಡಿದಾದ ರಸ್ತೆ, ಚಿಕ್ಕ ಚಿಕ್ಕ ಝರಿಗಳು, ಸಹಸ್ರಾರು ಪುಟ್ಟಪುಟ್ಟ ಹೂವುಗಳ ಮಧ್ಯದಲ್ಲಿ ನಡೆದು ಕೊಂಡು ಹೋಗಬೇಕು. ಹತ್ತಿ ಇಳಿದು ಬರಲು ವಯಸ್ಕರಿಗೆ ಸುಮಾರು ೩+ ಗಂಟೆಗಳ ಅವಕಾಶ ಬೇಕು. ಮುದುಕರು ಕೇವಲ ಹೋಗಬಹುದು ಅಷ್ಟೇ
ಸಂಪೂರ್ಣ ತುದಿ ಮುಟ್ಟುವ ಮೊದಲು ಎತ್ತರವಾದ ಒಂದು ಸ್ಥಳದಲ್ಲಿ ಗಂಗಾದೇವಿಗೆ ಒಂದು ಪುಟ್ಟ ಮಂದಿರವನ್ನು ನಿರ್ಮಿಸಿದ್ದಾರೆ. ವಾಸ್ತವದಲ್ಲಿ ಇದೇ ಈ ಪರ್ವತದ ಅತಿ ಎತ್ತರದ ಕೇಂದ್ರ. ಇಲ್ಲಿಂದ ಒಂದು ಚೂರು, ಅಂದರೆ ಒಂದು ೨೫ ಹೆಜ್ಜೆ ಇಳುಕಲಿನಲ್ಲಿ ನಡೆದರೆ ಒಂದು ಅತ್ಯಂತ ಅಪಾಯಕಾರಿಯಾದ ಪರ್ವತದ ಕೋಡು ಇದೆ. ಇದುವೆ ಚಂದ್ರಶಿಲಾ. ಇಲ್ಲಿ ಕೂಡ ಒಂದು ಪುಟ್ಟ ಅಮೃತಶಿಲೆಯ ಮಂಟಪದಲ್ಲಿ ಪಂಚಮುಖರುದ್ರನ ಲಿಂಗವಿದೆ. ತುಂಗನಾಥದಲ್ಲಿ ಕಾಣಿಸಿಕೊಂಡ ಪ್ರಶ್ನೆಗೆ ಉತ್ತರವು ಇಲ್ಲಿ ದೊರಕಿತು. ಇದಕ್ಕೇನೇ ತುಂಗನಾಥ ಎಂದಿದ್ದರೂ ಸರಿ ಆಗುತ್ತಿತ್ತೇನೋ. ಅಷ್ಟು ತುದಿಯಲ್ಲಿ ಇದೆ ಇದು. ಆದರೆ ಗಾಳಿಯ ಪ್ರಚಂಡ ವೇಗಕ್ಕೆ ಮಂಟಪವು ಧ್ವಸ್ತವಾಗಿ ಹೋಗಿ ಕೇವಲ ಲಿಂಗ ಮಾತ್ರವೇ ಉಳಿದುಕೊಂಡಿದೆ.
ಈ ಜಾಗಕ್ಕೂ ಎರಡು ಕಥೆಗಳಿವೆ. ರಾವಣನನ್ನು ಕೊಂದ ನಂತರ ಈ ಜಾಗದಲ್ಲಿ ರಾಮನು ತಪಸ್ಸನ್ನು ಮಾಡಿದ ಎನ್ನುವುದೊಂದು ಕಥೆ. ಚಂದ್ರನು ತಪಸ್ಸು ಮಾಡಿದ್ದ ಎನ್ನುವುದು ಇನ್ನೊಂದು ಕಥೆ. ಕಥೆಯ ಪ್ರಾಮಾಣ್ಯವೇನೇ ಇರಲಿ, ಜಾಗವು ಮಾತ್ರ ಅದ್ಭುತವಾದದ್ದು. ಈ ತುದಿಯಲ್ಲಿ ಒಂದು 25-30 ಜನರಷ್ಟೇ ಕೂಡಬಹುದಾದ ಸ್ಥಳಾವಕಾಶವಿದೆ. ಅಲ್ಲಿ ನಿಂತರೆ ಭಗವಂತನ ಸೃಷ್ಟಿಯ ಪರಿಚಯವು ಅಮೋಘವಾದ ರೀತಿಯಲ್ಲಿ ಆಗುವುದು. ಮಾನವರಿರಲಿ, ದೇವತೆಗಳೂ ಮೈಮರೆವ ಸೌಂದರ್ಯವು ಇಲ್ಲಿ ನಿಂತರೆ ಕಾಣುವುದು. ಚೌಖಂಬಾ, ತ್ರಿಶೂಲ್, ಬಂದರ್ ಪೂಂಛ್, ನಂದಾದೇವೀ, ಕೇದಾರಪರ್ವತ, ಶಿವಲಿಂಗ ಪರ್ವತ ಹೀಗೆ ಎಲ್ಲವುಗಳ ದರ್ಶನವೂ ಒಂದೆಡೆ ಆಗುತ್ತದೆ. ಚಳಿಗಾಲದಲ್ಲಿ ಈ ಪರ್ವತದ ಮೇಲೆ ಕುಳಿತು ಸೂರ್ಯೋದಯವನ್ನು ನೋಡಲು ಅತ್ಯಂತ ಪೈಪೋಟಿ ಇರುತ್ತದೆ. ಇದಕ್ಕೆಂದೆ ಮಧ್ಯರಾತ್ರಿ 2ಕ್ಕೆ ಟ್ರೆಕ್ಕಿಂಗ್ ಶುರುವಾಗುತ್ತದಂತೆ. ಮಳೆಗಾಲ ಮುಗಿದ ನಂತರ ಈ ಅದ್ಭುತವನ್ನು ನೋಡಲೆಂದೇ ವಿದೇಶೀ ಸಾಹಸಿಗಳು ಬಂದು ನೆರೆಯುತ್ತಾರೆ. ಇತ್ತೀಚೆಗೆ ನಮ್ಮ ದೇಶದ ಯುವಜನಾಂಗವೂ ಇತ್ತ ಆಕರ್ಷಿತವಾಗುತ್ತಿದೆ.
ನನ್ನದು ದುರ್ದೈವ ಎಂದು ಹೇಳಲು ಮನಸ್ಸಾಗದು. ಆದರೆ ನಾನು ಬಂದ ವೇಳೆಯೇ ಮಳೆಗಾಲವಾದ್ದರಿಂದ ನನಗೆ ಈ ತುದಿಯಲ್ಲಿಯೂ ಮೋಡಗಳ ಹೊರತು ಏನೂ ಕಾಣಿಸಲಿಲ್ಲ. ಅಲ್ಲಿಯೇ ಒಂದು ಹತ್ತು ನಿಮಿಷಗಳನ್ನು ಕಳೆದು ಹತ್ತಿದ್ದಕ್ಕಿಂತ ವೇಗವಾಗಿ ಇಳಿದು ಬಂದು ತುಂಗನಾಥನ ಮಂದಿರವನ್ನು ಸೇರಿಕೊಂಡೆ. ಧೋ ಎಂದು ಮಳೆ ಶುರು ಆಯಿತು.
ಉಳಿದುಕೊಳ್ಳುವ ವ್ಯವಸ್ಥೆ
ಒಂದೆರಡು ದಿನ ದೇವಸ್ಥಾನದ ಪರಿಸರದಲ್ಲಿಯೇ ಇರುವ ಇಚ್ಛೆಯಿದ್ದಲ್ಲಿ ಸಮಿತಿಯವರೇ ನಿರ್ಮಿಸಿದ ಕೋಣೆಗಳಲ್ಲಿ ಇರಬಹುದು. ಮೊದಲೇ ಕಾಯ್ದಿರಿಸಿಕೊಳ್ಳಬೇಕು. ಕೋಣೆಗಳು ಸ್ವಚ್ಛವಾಗಿಯೇ ಇದ್ದರೂ ಲಕ್ಸುರಿಯನ್ನು ನಿರೀಕ್ಷಿಸುವ ಜನರಿಗೆ ಅಲ್ಲ. ಓ.ಕೆ. ಎನ್ನುವ ಮಟ್ಟದವು. ಇನ್ನು ಎಲ್ಲಿಯೂ ಇದ್ದು ಬರುವ ಮನಸ್ತತ್ವ ಇರುವ ಜನರಿಗೆ ದೇವಸ್ಥಾನದ ಬಳಿಯೇ ಕಾಲೀಕಮಲೀ ಬಾಬಾ ಪಂಥದವರ ಧರ್ಮಶಾಲೆಯಿದೆ.
ಸಂದರ್ಶನಕ್ಕೆ ಸೂಕ್ತ ಸಮಯ
ದೇವರದರ್ಶನಕ್ಕೆ ಬರುವುದಾದರೆ ನಮ್ಮ ಬೇಸಿಗೆಯ ಸಮಯದಲ್ಲಿ ಬರಬೇಕು, ಪ್ರಕೃತಿಯ ದರ್ಶನಕ್ಕೆ ಬರುವುದಾರೆ ಇಲ್ಲಿನ ಚಳಿಗಾಲದಲ್ಲಿ ಬರಬೇಕು. ಡಿಸೆಂಬರ್ ಇಂದ ಫೆಬ್ರುವರಿಯ ತನಕ ಇಲ್ಲಿ ಚಳಿ ಮತ್ತು ಹಿಮದ ಆಟ ನಡೆದಿರುತ್ತದೆ. ಆ ಸಮಯದಲ್ಲಿ ಪ್ರಕೃತಿಪ್ರೇಮಿಗಳಿಗೆ ಹೇಳಿಮಾಡಿಸಿದಂತೆ ಇರುತ್ತದೆ ಇಲ್ಲಿಯ ಪ್ರಕೃತಿ. ಹಿಮದ ಮೇಲೆ ನಡೆಯುತ್ತಾ, ಹಿಮಾವೃತ ಪರ್ವತಗಳನ್ನು ನೋಡುವ ವೈಭವ ಆಗ. ಆದರೆ ಸಾಹಸಿಗಳ ದಂಡೇ ಇಲ್ಲಿ ನೆರೆದಿರುವ ಕಾರಣ ಮೊದಲೇ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳೊಂದಿಗೆ ಬರುವುದು ಒಳ್ಳೆಯದು.
ವಾಪಸ್ಸು (ಬದುಕಿ) ಬಂದಿದ್ದು
ನಾನು ಚೋಪಟಾದಿಂದ ಹೊರಡುವ ದಿನ ಮಳೆ ನಿಂತಿತ್ತು. ಸರಸರನೆ ಅಲ್ಲಿಂದ ಹೊರಟೆ. ಊಖೀಮಠ, ರುದ್ರಪ್ರಯಾಗ ಇಲ್ಲೆಲ್ಲ ಕಡೆಗಳಿಂದ ಇಳಿದು ಹತ್ತಿ ಬೇರೆ ಬೇರೆ ಗಾಡಿಗಳ ಮೂಲಕ ಪ್ರಯಾಣ ಮಾಡುವ ದೆಸೆ ಬಂದೊದಗುವ ಭಯವಿತ್ತು. ಈ ಭಯವನ್ನು ಹೆಚ್ಚಿಸುವ ಘಟನೆಯೊಂದು ನನ್ನ ಕಣ್ಣೆದುರೇ ನಡೆಯಿತು. ಚೋಪಟಾದಿಂದ ಸ್ವಲ್ಪವೇ ಮುಂದೆ ಬಂದಿದ್ದೆ. ನಾನು ಕುಳಿತ ಗಾಡಿಯ ಮುಂದೆ ಬಸ್ಸೊಂದು ಹೋಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಬಲಭಾಗದಲ್ಲಿ ಪರ್ವತವು ಜರಿದು ಟನ್ನುಗಟ್ಟಲೆ ಕೆಸರು ನಿಮಿಷಮಾತ್ರದಲ್ಲಿ ಸುರಿದು ಬಿಟ್ಟಿತು. ಬಸ್ಸಿನ ಮೇಲೆ ಬೀಳದೆ ಆ ಕೆಸರೆಲ್ಲ ಬಸ್ಸಿನ ಪಕ್ಕದಲ್ಲಿ ಸುರಿದು ಬಸ್ಸನ್ನೇ ಪರ್ವತದ ಎಡಭಾಗದ ಅಂಚಿಗೆ ನೂಕಿಬಿಟ್ಟಿತು. ಆದರೆ ದೈವಕೃಪೆ ಆ ಬಸ್ಸಿನ ಮೇಲೆ ಇತ್ತು. ತುದಿಗೆ ಜರಿದ ಬಸ್ಸು ಕೆಳಗೆ ಬೀಳದ ಹಾಗೆಯೇ ನಿಂತಿತು. ರಾಯರು ನನ್ನನ್ನು ಆ ಸ್ಥಳದಿಂದ ಸಾಕಷ್ಟು ದೂರದಲ್ಲಿ ನಿಲ್ಲಿಸಿದ್ದರು. ಏನೂ ತೊಂದರೆಯಾಗದೆ ಜೀವದಿಂದುಳಿದೆ. ಸ್ಥಳೀಯರು ಸಾಹಸ ಮಾಡಿ ಆ ಬಸ್ಸನ್ನು ಉಕ್ಕಿನ ಹಗ್ಗಗಳಿಂದ ಎಳೆದು ನಮಗೆಲ್ಲ ದಾರಿಮಾಡಿ ಕೊಟ್ಟರು. ಪುಣ್ಯಕ್ಕೆ ಎಲ್ಲೂ ಇಳಿಯದೆ ನಿರಂತರವಾಗಿ ಪಯಣಿಸಿ ಹರಿದ್ವಾರಕ್ಕೆ ಬಂದು ಮುಟ್ಟಿದೆ. ಮುಂದೆ ದೆಹಲಿ ಮಾರ್ಗವಾಗಿ ಊರಿಗೂ ಬಂದು ತಲುಪಿದೆ.
ನನ್ನ ಈ ಯಾತ್ರೆಗೆ ಧನಸಹಾಯ ಮಾಡಿದ ಆ ದಂಪತಿಗಳಿಗೆ ಚಿರಋಣಿ ನಾನು. ರಾಯರು, ತುಂಗನಾಥನು, ಮುಖ್ಯಪ್ರಾಣನು ಮತ್ತು ಅವನ ಅಪ್ಪನಾದ ಪರಮಮುಖ್ಯಪ್ರಾಣನು ಸಂತಸವನ್ನು ಕೊಡಲಿ.
ನನ್ನ ಈ ಯಾತ್ರೆಯ ಅನುಭವವು ನಿಮಗೆ ಸಂತಸವನ್ನು ಕೊಟ್ಟಿದೆ ಎಂದು ಭಾವಿಸುವೆ. ಬರಿ ಸಂತಸವನ್ನು ಮಾತ್ರವಲ್ಲ, ಒಂದು ಬಾರಿ ಆದರೂ ತುಂಗನಾಥನೆಡೆಗೆ ನಡೆಯುವಂತಹ ಪ್ರೇರಣೆ ನಿಮಗೆ ಮೂಡಿದಲ್ಲಿ ನನ್ನ ಹೃದಯವು ಆ ಮಂಜುಲವಾದ ಕುದುರೆಯ ಗಂಟೆಯಂತೆಯೇ ಕಿಣಿಕಿಣಿಸುವುದು.
Be First to Comment